×
Ad

ಸರಕಾರದ ಅನುದಾನ ಪಡೆವ ಶಿಕ್ಷಣ ಸಂಸ್ಥೆಗಳು ಮಾಹಿತಿ ಹಕ್ಕು ವ್ಯಾಪ್ತಿಗೆ ಬರಲಿವೆ: ಆಯೋಗ ಸ್ಪಷ್ಟನೆ

Update: 2020-12-15 19:52 IST

ಬೆಂಗಳೂರು, ಡಿ.15: ಸರಕಾರದ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕು ಅಧಿನಿಯಮ-2005ರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗವು ಸ್ಪಷ್ಟಪಡಿಸಿದೆ. 

ನಗರದ ಸೇಂಟ್ ಜೋಸೆಫ್ ಸಂಜೆ ಕಾಲೇಜು, ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜುಗಳು ಸರಕಾರದ ಅನುದಾನ ಪಡೆಯುತ್ತಿವೆ. ಸರಕಾರದ ಅನುದಾನವು ಸಾರ್ವಜನಿಕರ ತೆರಿಗೆ ಹಣವಾಗಿರುವ ಹಿನ್ನೆಲೆಯುಲ್ಲಿ ಅನುದಾನ ಪಡೆಯುವ ಸಂಸ್ಥೆಗಳು, ಮಾಹಿತಿ ಹಕ್ಕು ಅಧಿನಿಯಮದ ವ್ಯಾಪ್ತಿಗೆ ಒಳಪಡುತ್ತದೆ.

ಮಾಹಿತಿ ಹಕ್ಕು ಅಧಿನಿಯಮ-2005ರ ಅಡಿಯಲ್ಲಿ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಈ ಕಾಲೇಜುಗಳು ತಿರಸ್ಕರಿಸಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಸುಧಾ ಕಟ್ವಾ ಎಂಬುವವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ಪಷ್ಟನೆ ನೀಡಿದೆಯಲ್ಲದೆ, ಅರ್ಜಿದಾರರು ಕೋರಿರುವ ಮಾಹಿತಿಯನ್ನು 30 ದಿನಗಳೊಳಗೆ ನೀಡುವಂತೆ ಈ ಮೂರೂ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.

ಮಾಹಿತಿ ನೀಡಲು ನಿರಾಕರಿಸಿದ ಈ ಮೂರು ಕಾಲೇಜುಗಳಿಗೆ ಮಾಹಿತಿ ಹಕ್ಕು ಆಯೋಗವು ತಲಾ 25,000 ರೂ. ದಂಡ ಯಾಕೆ ವಿಧಿಸಬಾರದೆಂದು ಪ್ರಶ್ನಿಸಿದೆ. ಅಂತೆಯೇ, ಮುಂದಿನ ಜ.13ರ ವಿಚಾರಣೆ ವೇಳೆ ಹಾಜರಿರಲು ಆದೇಶಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News