ಗೋಮಾಂಸ ರಫ್ತು ಮಾಡುವ ಬ್ರಾಹ್ಮಣರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಜಾರಿ: ಪ್ರೊ.ಕೆ.ಎಸ್.ಭಗವಾನ್

Update: 2020-12-15 16:16 GMT

ಮೈಸೂರು, ಡಿ.17: ಗೋಮಾಂಸ ರಫ್ತು ಮಾಡುವವರೆಲ್ಲಾ ಮೇಲ್ವರ್ಗದವರು, ಬ್ರಾಹ್ಮಣರು. ಹಾಗಾಗಿ ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡಿದ್ದಾರೆ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮೇರಿಕಾದಲ್ಲಿ ಗೋಮಾಂಸ ತಿನ್ನಲೆಂದೇ ಗೋವುಗಳನ್ನು ಬೆಳೆಸುತ್ತಾರೆ. ಅಲ್ಲಿ ಗೋಮಾಂಸಕ್ಕೆ ಹೆಚ್ಚಿನ ಬೆಲೆಯಿದೆ. ಹಾಗಾಗಿ ಇಲ್ಲಿನ ಬ್ರಾಹ್ಮಣರು ಅವರ ವ್ಯಾಪಾರ ಹೆಚ್ಚಿಸಿಕೊಳ್ಳಲು ಗೋವು ಪವಿತ್ರ ಎಂದು ಹೇಳಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡಿದ್ದಾರೆ ಎಂದು ಹೇಳಿದರು.

ಇಲ್ಲಿನ ಜನರು ಹೆಚ್ಚು ಹೆಚ್ಚು ಗೋಮಾಂಸ ತಿನ್ನಲು ಪ್ರಾರಂಭ ಮಾಡಿದರೆ ನಮ್ಮ ವ್ಯವಹಾರಕ್ಕೆ ತೊಂದರೆಯಾಗಲಿದೆ ಎಂದು ಅರಿತ ಮನುವಾದಿಗಳು ಗೋವು ಪವಿತ್ರ, ಅದನ್ನು ಹತ್ಯೆ ಮಾಡಬಾರದು ಎಂದು ಹೇಳುತ್ತಿದ್ದಾರೆ. ಇಲ್ಲಿನ ಜನರು ಗೋವುಗಳನ್ನು ತಿನ್ನದಿದ್ದರೆ ಇವರಿಗೆ ಬೇಕಾದ ವೆಚ್ಚದಲ್ಲಿ ಅಮೆರಿಕಾಗೆ ರಫ್ತು ಮಾಡಬಹುದು. ಅದಕ್ಕಾಗಿ ದೊಡ್ಡ ಸಂಚನ್ನೇ ಈಗಾಗಲೇ ವಿಧಾನ ಸಭೆಯಲ್ಲಿ ಮಂಡನೆ ಮಾಡಿ ಮೇಲ್ಮನೆಗೆ ಕಳುಹಿಸಲಾಗಿದೆ. ಮೇಲ್ಮನೆಯಲ್ಲಿ ಈ ಕಾನೂನಿಗೆ ಅನುಮೋದನೆ ಮಾಡಬಾರದು ಎಂದು ಹೇಳಿದರು. 

ಗೋವುಗಳನ್ನು ಹತ್ಯೆ ಮಾಡಬೇಕು ಎಂದು ಯಾರೂ ಬಯಸುವುದಿಲ್ಲ. ಗೋವುಗಳಿಗೆ ವಯಸ್ಸಾದಾಗ ಅವುಗಳಿಗೆ ಹುಲ್ಲು, ಸೇರಿದಂತೆ ಆಹಾರಗಳನ್ನು ನೀಡಬೇಕು. ಅವು ಯಾವುದಕ್ಕೂ ಉಪಯೋಗವಿಲ್ಲ ಎಂದಾಗ ಆರ್ಥಿಕವಾಗಿ ತೊಂದರೆಗೆ ಸಿಲುಕುತ್ತಾರೆ. ಆಗ ಅವುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರೇ ಗೋಮಾಂಸ ತಿನ್ನದೇ ಇರುವವನು ನಿಜವಾದ ಬ್ರಾಹ್ಮಣನಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಬ್ರಾಹ್ಮಣರು ಮಾಡುತ್ತಿದ್ದ ಯಜ್ಞ, ಯಾಗಾದಿಗಳಿಗೆ ಗೋಮಾಂಸ ಬಳಕೆ ಮಾಡಲಾಗುತ್ತಿತ್ತು ಎಂಬ ದಾಖಲೆ ಇದೆ. ಇಂತಿಂಥ ಪುರೋಹಿತರು ಇಂತಹ ಗೋಮಾಂಸವನ್ನೇ ತಿನ್ನಬೇಕು ಎಂಬ ಪಟ್ಟಿಯನ್ನು ಮಾಡಲಾಗಿದೆ. ಅಂತಹದರಲ್ಲಿ ಈಗ ಏಕೆ ಗೋಮಾಂಸ ನಿಷೇಧ ಮಾಡಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತ ನಡೆಸುವ ಕಡೆಗಳಲ್ಲಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡುವ ಮೊದಲು ಸಾರ್ವಜನಿಕವಾಗಿ ಚರ್ಚೆಗೆ ಇಡಬೇಕಿತ್ತು. ಇಲ್ಲದೆ ಎರಡೂ ಸದನದಲ್ಲಿ ಇಟ್ಟು ಮಾತನಾಡಬೇಕಿತ್ತು. ಅದನ್ನು ಬಿಟ್ಟು ಯಾರೋ ಹೇಳಿದರು ಎಂದು ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News