ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಆರೋಪ: ಪ್ರಶಾಂತ್ ಸಂಬರಗಿ ವಿರುದ್ಧ ಆಯುಕ್ತರಿಗೆ ದೂರು

Update: 2020-12-15 16:22 GMT

ಬೆಂಗಳೂರು, ಡಿ.15: ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್ ನಾಯಕರ ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದಲ್ಲದೆ, ಕೋಮುದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೆಪಿಸಿಸಿ ಬೆಂಗಳೂರು ಕೇಂದ್ರ ಜಿಲ್ಲಾ ಪ್ರಚಾರ ಸಮಿತಿ ದೂರು ಸಲ್ಲಿಸಿದೆ.

ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರ ನಿಯೋಗ, ಲಿಖಿತ ದೂರು ಸಲ್ಲಿಸಿ, ಪ್ರಶಾಂತ್ ಸಂಬರಗಿ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.

ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ಧನ್, ಪ್ರಶಾಂತ್ ಸಂಬರಗಿ ಎಂಬಾತ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡದೆ, ಕೋಮು ದ್ವೇಷಕ್ಕೆ ಮೀಸಲಿಟ್ಟಿದ್ದಾನೆ. ಈತನ ವಿರುದ್ಧ ಹಲವು ಬಾರಿ ದೂರು ಸಲ್ಲಿಸಿದರೂ, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಯಾರೇ ಆಗಲಿ, ಏಕತೆಗಾಗಿ ಶ್ರಮಿಸಬೇಕು. ಆದರೆ, ಪ್ರಶಾಂತ್ ಸಂಬರಗಿ ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸುವ ಸಂಚು ಹೊಂದಿದಂತೆ ಇದೆ ಎಂದು ಆರೋಪಿಸಿದ ಅವರು, ಪ್ರಶಾಂತ್ ಸಂಬರಗಿ ಮೇಲೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗದೆ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News