×
Ad

ರಾಣಿಬೆನ್ನೂರಿನ ಗ್ರಾಮದಲ್ಲಿ ಮಾದಿಗರ ಕಣ್ಣೀರು: ಚುನಾವಣಾ ಬಹಿಷ್ಕಾರಕ್ಕೆ ಅವಕಾಶ ಕೋರಿ ಎಸ್‍ಡಿಎಸ್ ಒತ್ತಾಯ

Update: 2020-12-15 22:36 IST

ಹಾವೇರಿ, ಡಿ.15: ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮಾದಿಗ ಸಮುದಾಯ ವಸತಿಗಾಗಿ ಹಲವು ದಶಕಗಳಿಂದ ಬೇಡಿಕೆ ಸಲ್ಲಿಸಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ನಮಗೆ ಅವಕಾಶ ಕೊಡಿ ಎಂದು ಸ್ವಾಭಿಮಾನಿ ದಲಿತ ಶಕ್ತಿ ನೇತೃತ್ವದಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚುನಾವಣಾ ಬಹಿಷ್ಕಾರಕ್ಕೆ ಕೋರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಎಸ್ಸಿ-ಎಸ್ಟಿ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ ಹಾವೇರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಗೆ ಪತ್ರ ಬರೆದಿರುವ ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆ, ಸಂತ್ರಸ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವವರೆಗೆ ಎಲ್ಲ ತರಹದ ಚುನಾವಣೆ ಬಹಿಷ್ಕಾರಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿದೆ.

ಸಮಸ್ಯೆಗಳ ಮಹಾಪೂರ: ಅಸುಂಡಿ ಗ್ರಾಮದ ಮಾದಿಗ ಸಮುದಾಯದ ಒಂದು ಮನೆಯಲ್ಲಿ 2, 3 ಕುಟುಂಬಗಳು ವಾಸಿಸುತ್ತಿವೆ. ಇದರಿಂದ ಒಂದು ಕುಟುಂಬ ಅಡಿಗೆ ಮಾಡಿದ ಮೇಲೆ, ಮತ್ತೊಂದು ಕುಟಂಬ ಅಡಿಗೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮನೆಗಳಲ್ಲಿ ಸ್ನಾನ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದೆ ರಾತ್ರಿ ಸಮಯದಲ್ಲಿ ಅಡ್ಡಲಾಗಿ ಸೀರೆ ಕಟ್ಟಿಕೊಂಡು ಸ್ನಾನ ಮಾಡಬೇಕಾದ ಸಂದಿಗ್ಧ ಸ್ಥಿತಿ ಇದೆ.

ಗ್ರಾಮದ ಮಾದಿಗ ಸಮುದಾಯ ಹಗಲಿನಲ್ಲಿ ಕೂಲಿ ಮಾಡಿ, ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡಲು ಮನೆಯಿಲ್ಲವಾಗಿದೆ. ನಾವು ಅಧಿಕಾರಿಗಳನ್ನು ಮತ್ತೇನು ಕೇಳಿಲ್ಲ. ಕನಿಷ್ಠ ನೆಮ್ಮದಿಯಾಗಿ ವಾಸಿಸಲು ಒಂದು ಸೂರು ಕಟ್ಟಿಕೊಡಿ ಎಂದು ಕಳೆದ 60 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಇಲ್ಲಿಯವರೆಗೂ ನಮ್ಮ ಬೇಡಿಕೆಗಳಿಗೆ ಯಾವ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಗ್ರಾಮದ ಶಿವಾನಂದ, ಶಿವಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಧಿಕಾರಿಗಳಿಗೆ ಅಸುಂಡಿ ಗ್ರಾಮದ ಮಾದಿಗರು ತಮ್ಮಂತೆ ಮನುಷ್ಯರೆಂದು ಭಾವಿಸಿದ್ದರೆ ನಮ್ಮ ಸಮಸ್ಯೆ, ನಮ್ಮ ನೋವು ಏನೆಂದು ಗೊತ್ತಾಗುತ್ತಿತ್ತು. ನಾವೇನು ಭಾರೀ ಭಂಗಲೆ ಕೇಳಿದ್ದೇವೆಯೇ. ಗೌರವದಿಂದ ಬದುಕಲು ಒಂದು ಸುಸಜ್ಜಿತವಾದ ಮನೆ ಕಟ್ಟಿಕೊಡಲು ಆರ್ಥಿಕ ಸೌಲಭ್ಯ ಕೇಳುತ್ತಿದ್ದೇವೆ. ಕಳೆದ 60 ವರ್ಷಗಳಿಂದ ಯಾವುದೇ ಸೌಲಭ್ಯ ನೀಡದ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಏನೆಂದು ಕರೆಯಬೇಕು. ಹೀಗಾಗಿ ಈ ಬಾರಿಯ ಗ್ರಾಮಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಲು ಅವಕಾಶ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಅಸುಂಡಿ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ 67 ಮನೆಗಳಿವೆ. ಇದರಲ್ಲಿ 36 ಮನೆಗಳಲ್ಲಿ ಎರಡು ಮತ್ತು ಮೂರು ಕುಟುಂಬಗಳು ವಾಸಿಸುತ್ತಿವೆ. ಈ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆಯಿರುವ ಮನೆಗಳ ಸಂಖ್ಯೆ ಕೇವಲ 4 ಆಗಿದೆ.

ಜಗತ್ತು ಆಧುನಿಕ, ತಂತ್ರಜ್ಞಾನ ಅವಿಷ್ಕಾರದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದರಲ್ಲಿ ಭಾರತವೂ ತಾನೇನು ಕಮ್ಮಿಯಿಲ್ಲ ಎಂಬಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಖರ್ಚು ಮಾಡಿ, ಮಂಗಳ, ಚಂದ್ರನೆಡೆಗೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಆದರೆ, ನಮ್ಮದೇ ಊರಿನ ಮಾದಿಗ ಸಮುದಾಯ ನೆಮ್ಮದಿಯಾಗಿ ಮಲಗಲು, ಸ್ನಾನ ಮಾಡಲು ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸೌಲಭ್ಯ ಪಡೆಯದ ಅಸುಂಡಿ ಗ್ರಾಮದ ಮಾದಿಗ ಸಮುದಾಯ ಗ್ರಾಮಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

-ಎಸ್.ಶಿವಲಿಂಗಂ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ದಲಿತ ಶಕ್ತಿ

Writer - -ಮಂಜುನಾಥ ದಾಸನಪುರ

contributor

Editor - -ಮಂಜುನಾಥ ದಾಸನಪುರ

contributor

Similar News