ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಎಗ್ಗಿಲ್ಲದೆ ಡ್ರೋನ್‍ಗಳ ಹಾರಾಟ
ವಿಜಯನಗರ, ಡಿ.15: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಮತ್ತು ಸ್ಮಾರಕಗಳ ಮೂಲ ಸ್ವರೂಪದ ಸಂರಕ್ಷಣೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಪದೇ ಪದೇ ನಿಯಮ ಉಲ್ಲಂಘನೆಯಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇದ್ದು, ಪರವಾನಿಗೆ ಇಲ್ಲದೇ ಡ್ರೋನ್ ಕ್ಯಾಮೆರಾಗಳ ಹಾರಾಟ ಎಗ್ಗಿಲ್ಲದೇ ಮುಂದುವರಿದಿವೆ. ಹೀಗಾಗಿ ಅಧಿಕಾರಿಗಳು ಕ್ರಮಗಳ ಕೈಗೊಳ್ಳಲು ಮುಂದಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳ ಅಧಿಕಾರಿಗಳ ಕಣ್ತಪ್ಪಿಸಿ ಡ್ರೋನ್ ಕ್ಯಾಮೆರಾ ಹಾರಾಟ ನಡೆಸಲಾಗಿದೆ. ನಿಯಮಗಳ ಪ್ರಕಾರ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾನಿಗೆ ಇಲ್ಲದೇ ಡ್ರೋನ್ ಹಾರಾಟ ನಡೆಸುವಂತಿಲ್ಲ. ಹಾಗಿದ್ದರೂ ಹಂಪಿಯಲ್ಲಿ ಪದೇ ಪದೇ ಡ್ರೋನ್‍ಗಳ ಹಾರಾಟ ನಡೆದಿರುವುದು ಕಂಡು ಬರುತ್ತಿದೆ. ಇದರಿಂದ ವಿಶ್ವ ಪರಂಪರೆ ತಾಣದ ಭದ್ರತೆಗೂ ಡ್ರೋಣ್‍ಗಳ ಹಾರಾಟ ಆತಂಕವನ್ನು ತಂದಿದೆ. ಹೀಗಾಗಿ ಅಧಿಕಾರಿಗಳು ಇದೀಗ ಡ್ರೋಣ್ ಹಾರಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಮಾತನಾಡಿ, ಡ್ರೋನ್ ಹಾರಾಟ ನಡೆಸಿದ್ದರ ಕುರಿತ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಈ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಹಂಪಿ ಬಳಿ ಡ್ರೋನ್ ಹಾರಾಟ ನಡೆಸುತ್ತಿರುವ ಕುರಿತು ಸ್ಥಳೀಯ ಮಾರ್ಗದರ್ಶಕರು ಮಾಹಿತಿ ನೀಡಿದ್ದರು. ನಾವೂ ಕೂಡ ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಸಾಕಷ್ಟು ಬಾರಿ ಕೆಲ ಪ್ರವಾಸಿಗರು ಅಕ್ರಮವಾಗಿ ಡ್ರೋನ್ ಹಾರಾಟ ನಡೆಸುತ್ತಲಿರುತ್ತಾರೆ. ಮಾರುಕಟ್ಟೆಗಳಲ್ಲಿ ಭಾರವಿಲ್ಲದ ಡ್ರೋನ್‍ಗಳು ಲಭ್ಯವಾಗುತ್ತಿದ್ದು, ಇದು ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂಪಿಯಲ್ಲಿರುವ ಸ್ಥಳೀಯ ಉದ್ಯಮಿ ಮಂಜುನಾಥ್ ಮಾತನಾಡಿ, ಕೆಲವರು ಹ್ಯಾಂಡ್ಹೆಲ್ಡ್ ಡ್ರೋನ್‍ಗಳನ್ನು ಬಳಕೆ ಮಾಡಿ ಬೆಳಗಿನ ಜಾವ ಅಥವಾ ಸಂಜೆ ವೇಳೆಯಲ್ಲಿ ಬಳಕೆ ಮಾಡುತ್ತಿರುತ್ತಾರೆ. ಹಂಪಿಯ ಸುತ್ತಮುತ್ತಲೂ ಸಾಕಷ್ಟು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ನವಜೋಡಿಗಳು ಡ್ರೋನ್ ಬಳಸಿ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆಸಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಈವರೆಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದಿದ್ದಾರೆ.