ಕೊರೋನ ಸಂಕಷ್ಟದಲ್ಲೂ ರಾಜ್ಯದಲ್ಲಿ ಶೇ.42ರಷ್ಟು ವಿದೇಶಿ ನೇರ ಹೂಡಿಕೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಡಿ. 16: `ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಭೂಮಿ ಖರೀದಿಸಲು ಸುಲಭವಾಗಲಿದೆ. ಕೊರೋನ ಸಂಕಷ್ಟದ ಅವಧಿಯಲ್ಲೂ ರಾಜ್ಯ ಶೇ.42ರಷ್ಟು ವಿದೇಶಿ ನೇರ ಬಂಡವಾಳ ಹರಿದು ಬರಲು ಈ ಕಾಯ್ದೆಯಿಂದ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಕೆಜಿ ರಸ್ತೆಯಲ್ಲಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ(ಎಫ್‍ಕೆಸಿಸಿಐ) 103ನೆ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜತೆಗೆ ಜಾಗತಿಕ, ಆರ್ಥಿಕತೆಯನ್ನು ಬಿಕ್ಕಟ್ಟಿನತ್ತ ಕೊಂಡೊಯ್ದಿದೆ. ಇದೀಗ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರಲು ಆರಂಭಿಸಿವೆ ಎಂದು ತಿಳಿಸಿದರು.
ಕೋವಿಡ್-19 ಅನಾನುಕೂಲಗಳ ತೀವ್ರತೆಯನ್ನು ತಗ್ಗಿಸಲು ಆರ್ಥಿಕ ಒತ್ತಡವನ್ನು ನಿವಾರಿಸಲು ಆರ್ಥಿಕ ಬೆಳವಣಿಗೆ ಸಾಧಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಈಗಾಗಲೇ ಸೂಕ್ತ ಪರಿಹಾರ ಮತ್ತು ಉತ್ತೇಜನ ಪ್ಯಾಕೇಜ್‍ಗಳನ್ನು ಘೋಷಿಸಿವೆ. ಇದು ಕೈಗಾರಿಕಾದ್ಯಮಿಗಳ ವಿಶ್ವಾಸವನ್ನು ಹೆಚ್ಚಿಸಿ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸಲು ಸಹಕಾರಿ ಎಂದು ಯಡಿಯೂರಪ್ಪ ತಿಳಿಸಿದರು.
ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯಕ್ಕೆ ಶೇ.42ರಷ್ಟು ವಿದೇಶಿ ನೇರ ಬಂಡವಾಳ ಬಂದಿರುವುದು ಸಂತಸದ ವಿಚಾರ. ಇತ್ತೀಚಿನ ಕರ್ನಾಟಕ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದ ಅವರು, ಈ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಕೈಗಾರಿಕೋಧ್ಯಮಿಗಳಿಗೆ ಭೂಮಿ ಖರೀದಿ ಸುಲಭವಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ವಾಣಿಜ್ಯ ವ್ಯವಹಾರಗಳು ಸುಗಮವಾಗಿ ನಡೆಯಲು ಕೈಗಾರಿಕಾ ಸೌಲಭ್ಯ ಕಾಯ್ದೆಗೂ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಪ್ರಕಾರ ಯಾವುದೇ ಉದ್ಯಮವನ್ನು ಆರಂಭಿಸಲು ವಿವಿಧ ಪರವಾನಗಿಗಳ ತಕ್ಷಣದ ಅನುಮೋದನೆ ಅಗತ್ಯವಿಲ್ಲ. ಉದ್ಯಮ ಆರಂಭವಾದ ಮೊದಲ ಮೂರು ವರ್ಷದೊಳಗೆ ಎಲ್ಲ ಪರವಾನಗಿಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ ಕಾರ್ಮಿಕ ಕಾಯ್ದೆಗೂ ಸುಧಾರಣೆಗಳನ್ನು ತರಲು ಸರಕಾರ ಮುಂದಾಗಿದೆ. ಕರ್ನಾಟಕ ಕೈಗಾರಿಕಾ ವಲಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, 2020-25ರ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸುವ ಮೂಲಕ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕಾ ಸಮೂಹದ ಪರವಾಗಿ ಗಮನಾರ್ಹ ಸುಧಾರಣೆಗಳನ್ನು ತಂದು ಆರ್ಥಿಕ ಬೆಳವಣಿಗೆಗೆ ಸರ್ವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐನ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಹಿರಿಯ ಉಪಾಧ್ಯಕ್ಷ ಐ.ಎಸ್.ಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಸಿ.ಆರ್.ಜನಾರ್ಧನ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.