ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆಗೆ ಸಿದ್ದರಾಮಯ್ಯ ಬಿಡುತ್ತಿಲ್ಲ: ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು, ಡಿ. 16: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ರಾಜೀನಾಮೆಗೆ ಮುಂದಾದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡಲು ಬಿಡುತ್ತಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಲ್ಮನೆಯಲ್ಲಿ ನಿನ್ನೆ ನಡೆದ ಘಟನೆಯನ್ನು ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲೆ ಒಂದೊಂದು ಕಪ್ಪುಚುಕ್ಕೆಯಾಗಿದ್ದು, ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಭಾಪತಿಯಾಗಿದ್ದ ಡಿ.ಎಚ್.ಶಂಕರ್ ಮೂರ್ತಿಯವರ ವಿರುದ್ಧ ಕಾಂಗ್ರೆಸ್ ಪಕ್ಷವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ ಸಂದರ್ಭದಲ್ಲಿ ಅವರು ಪೀಠದಲ್ಲಿ ಕೂರದೆ ಉಪಸಭಾಪತಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿದ್ದರು. ಅಲ್ಲದೆ, ಅತ್ಯಂತ ಗೌರವಯುತವಾಗಿ ಚರ್ಚೆ ನಡೆಸಲು ಅವಕಾಶ ನೀಡಿದರು. ಆದರೆ, ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಮುಂದಾದರೂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಡುತ್ತಿಲ್ಲ ಎಂದು ಟೀಕಿಸಿದರು.
ಬಿಹಾರ, ಪಶ್ಚಿಮ ಬಂಗಾಳ, ಉತ್ತಮ ಪ್ರದೇಶದ ಮಾದರಿಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ತಿನಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದೆ. ವಿಧಾನ ಪರಿಷತ್ ಸಭಾಪತಿ ಪ್ರತಾಪ ಚಂದ್ರಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ. ಇದಕ್ಕೆ ಜೆಡಿಎಸ್ ಬೆಂಬಲವನ್ನು ನೀಡಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದೆ ಎಂದು ರೇಣುಕಾಚಾರ್ಯ ವಿವರಣೆ ನೀಡಿದರು.