×
Ad

ಕುಮಾರಸ್ವಾಮಿ ಜನ್ಮದಿನಕ್ಕೆ ಪ್ರಧಾನಿ, ಸಿಎಂ ಸಹಿತ ಹಲವು ಗಣ್ಯರಿಂದ ಶುಭ ಹಾರೈಕೆ

Update: 2020-12-16 18:09 IST

ಬೆಂಗಳೂರು, ಡಿ. 16: ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಾಡಿನ ಹಲವು ಗಣ್ಯರು ಶುಭ ಕೋರಿದ್ದಾರೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, `ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ದೀರ್ಘಾಯುಷ್ಯ ನೀಡಿ ಕರುಣಿಸಲಿ' ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದು, 'ಮಾಜಿ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿರುವ ಎಚ್‍ಡಿಕೆ ಅವರಿಗೆ ಶುಭ ಕೋರಿ ಟ್ವೀಟ್ ಮಾಡಿರುವ ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, `ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ ನೀಡಿ ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವಂತಾಗಲಿ ಎಂದು ಹಾರೈಸುತ್ತೇನೆ' ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, `ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

`ಡಿ.16ರಂದು ನನ್ನ ಜನ್ಮದಿನ. ಕೊರೋನ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ. ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ ನನ್ನನ್ನು ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು. ಪ್ರತಿ ಜನ್ಮದಿನಗಳು ನಮ್ಮ ಇರುವಿಕೆಯನ್ನು ನೆನಪಿಸುತ್ತವೆ ನಿಜ, ಆದರೆ ಬದುಕಿದ್ದಷ್ಟು ದಿನ ಕಷ್ಟದಲ್ಲಿರುವ ಜನರ ಒಳಿತಿಗೆ ನಿಸ್ವಾರ್ಥವಾಗಿ, ಕಾರುಣ್ಯಭರಿತವಾಗಿ ದುಡಿದಾಗ ನಮ್ಮ ಹುಟ್ಟು ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ' ಎಂದು ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಸ್ಪಷ್ಟಣೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News