ವಿಸ್ಟ್ರಾನ್ ಕಂಪೆನಿಯಲ್ಲಿ ನಡೆದ ದಾಂಧಲೆಗೆ ಸರಕಾರವೇ ಹೊಣೆ: ಎಐಟಿಯುಸಿ

Update: 2020-12-16 16:22 GMT

ಬೆಂಗಳೂರು, ಡಿ.16: ಕೋಲಾರದ ವಿಸ್ಟ್ರಾನ್ ಕಂಪೆನಿಯಲ್ಲಿ ಡಿ.12ರಂದು ನಡೆದ ದಾಂಧಲೆ ಘಟನೆಗೆ ಕಾರ್ಖಾನೆಯ ಆಡಳಿತ ಹಾಗೂ ರಾಜ್ಯ ಸರಕಾರವೇ ನೇರ ಹೊಣೆಗಾರರೆಂದು ಎಐಟಿಯುಸಿ ಬೆಂಗಳೂರು ಜಿಲ್ಲಾ ಮಂಡಳಿ ಆರೋಪಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಂಡಳಿಯು, ವಿಸ್ಟ್ರಾನ್ ಕಂಪೆನಿಯಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ನಿರಂತರ ಶೋಷಣೆ, ಗುತ್ತಿಗೆದಾರರಿಂದ ವೇತನ ಪಾವತಿಯಾಗದೆ ಇರುವುದು ಹಾಗೂ ರಾಜ್ಯ ಸರಕಾರದ ಕೈಗಾರಿಕಾ ನೀತಿಗಳ ಉಲ್ಲಂಘನೆ ಮುಂತಾದವುಗಳಿಂದ ಕಾರ್ಮಿಕರು ರೋಸಿ ಹೋಗಿದ್ದರಿಂದ ಈ ಘಟನೆ ನಡೆದಿದೆ ಎಂದು ಅಭಿಪ್ರಾಯಿಸಿದೆ.

ಈ ಕಾರ್ಖಾನೆಯಲ್ಲಿ ಶೇ.85ರಷ್ಟು ಗುತ್ತಿಗೆ ಕಾರ್ಮಿಕರಿದ್ದಾರೆ. ಇದು ಗುತ್ತಿಗೆ ಕಾರ್ಮಿಕ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಖಾಯಂ ಸ್ವರೂಪದ ಕೆಲಸವನ್ನು ಗುತ್ತಿಗೆ ಕಾರ್ಮಿಕರಿಂದ ಮಾಡಿಸಿಕೊಂಡು. ಅದಕ್ಕೆ ತಕ್ಕ ವೇತನವನ್ನು ಆಡಳಿತ ವರ್ಗ ನೀಡುತ್ತಿರಲಿಲ್ಲ. ಹೀಗಾಗಿ ಈ ದಾಂಧಲೆ ಪ್ರಕರಣದಲ್ಲಿ ಕಾರ್ಖಾನೆಯ ಆಡಳಿತ ವರ್ಗ ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಐಟಿಯುಸಿ ಬೆಂಗಳೂರು ಜಿಲ್ಲಾಧ್ಯಕ್ಷ ಎಂ.ದೀಪಕ್ ಒತ್ತಾಯಿಸಿದ್ದಾರೆ.

ವಿಸ್ಟ್ರಾನ್ ಕಂಪೆನಿಯಲ್ಲಿ ಕೆಲಸ ಮಾಡಿದ ಅವಧಿಗೆ ವೇತನ ನಿರಾಕರಣೆ, 8ಗಂಟೆಯ ಬದಲಿಗೆ 12ಗಂಟೆಯ ಕೆಲಸದ ಪಾಳಿ, ಹೆಚ್ಚುವರಿ ಕೆಲಸಕ್ಕೆ ಒವರ್ ಟೈಮ್ ವೇತನ ನೀಡದಿರುವುದು, ರಾತ್ರಿ ಪಾಳೆಯದಲ್ಲೂ ಮಹಿಳಾ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಮುಂತಾದವುಗಳು ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಸ್ಟ್ರಾನ್ ಕಂಪೆನಿಯಲ್ಲಿ ದಾಂಧಲೆ ನಡೆದ ನಂತರ ಕಂಪೆನಿಯ ಆಡಳಿತವರ್ಗ 150 ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಿ, ಕಾನೂನುಬಾಹಿರ ದೈಹಿಕ ಹಿಂಸೆ, ದೌರ್ಜನ್ಯ ನಡೆಸುತ್ತಿದ್ದಾರೆ. ಇದು ತಕ್ಷಣ ನಿಲ್ಲಬೇಕು. ಹಾಗೂ ಪೊಲೀಸರು ಬಂಧಿಸಿರುವ ಕಾರ್ಮಿಕರನ್ನು ಕೂಡಲೇ ಬಿಡುಗಡೆ ಮಾಡಬೇಕು.

-ಎಂ.ಡಿ.ಹರಿ ಗೋವಿಂದ, ಪ್ರಧಾನ ಕಾರ್ಯದರ್ಶಿ, ಎಐಟಿಯುಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News