ಶಿವಮೊಗ್ಗ: ಉಪವಿಭಾಗಾಧಿಕಾರಿ ಮಿಂಚಿನ ದಾಳಿ; ತೆಲಂಗಾಣದ 29 ಜೀತ ಕಾರ್ಮಿಕರ ರಕ್ಷಣೆ
ಶಿವಮೊಗ್ಗ, ಡಿ.16: ಆಂದಪುರ ಸಮೀಪದ ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಇರುವಕ್ಕಿ ಗ್ರಾಮದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ತೆಲಂಗಾಣ ರಾಜ್ಯ ಮೂಲದವರಾದ 29 ಜನ ಜೀತದಾಳುಗಳನ್ನು ಸಾಗರ ಉಪ ವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಪತ್ತೆ ಹಚ್ಚಿ ಬಿಡುಗಡೆಗೊಳಿಸಿ ರಕ್ಷಿಸಿದ ಘಟನೆ ನಡೆದಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಇಲ್ಲಿನ ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಹಾಳ, ಕಂದಾಯ ನಿರೀಕ್ಷಕ ರಘು ಇನ್ನಿತರರನ್ನೊಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ ಜೀತ ಪ್ರಕರಣ ಪತ್ತೆಮಾಡಿದೆ.
ಕ್ಯಾಂಪಸ್ ನಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪೈಕಿ ಜೀತದಾಳುಗಳು ಇರುವ ಬಗ್ಗೆ ಪ್ರಶ್ನಿಸಿದಾಗ ಕಾಮಗಾರಿ ಮುಖ್ಯಸ್ಥರಿಂದ ಹಾರಿಕೆಯ ಮಾತುಗಳು ಕೇಳಿ ಬಂದವು. ಕಾರ್ಮಿಕರು ವಾಸಿಸಲು ವ್ಯವಸ್ಥೆ ಮಾಡಿರುವ ಶೆಡ್ ಗೆ ದಾಳಿ ಮಾಡಿದಾಗ 12 ಜನ ಪುರುಷರು, 17 ಜನ ಮಹಿಳೆಯರು ಮತ್ತು 16 ಮಕ್ಕಳು ಜೀತ ವ್ಯವಸ್ಥೆಯಲ್ಲಿರುವುದು ತಿಳಿದು ಬಂದಿದೆ. ಕಾರ್ಮಿಕರ ಶೆಡ್ ನಲ್ಲಿ ಕನ್ನಡ ಭಾಷೆ ಬಲ್ಲವರು ಇರಲಿಲ್ಲ. ತೆಲುಗು ಭಾಷೆ ಗೊತ್ತಿರುವ ವಾಸುದೇವ್ ಎಂಬವರ ಮೂಲಕ ಸಂವಹನ ನಡೆಸಿದಾಗ ಹುನಿಯಾ ಮತ್ತು ಈಶ್ವರಯ್ಯ ಎಂಬವರು ತಮ್ಮನ್ನು ಇಲ್ಲಿ ತಂದು ಕೆಲಸಕ್ಕೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಆಂದ್ರಪ್ರದೇಶದ ತೆಲಂಗಾಣ ರಾಜ್ಯದ ಕರ್ನೂಲ್ ಜಿಲ್ಲೆಯವರಾದ ಇವರಿಗೆ ಹುನಿಯಾ ಮತ್ತು ಈಶ್ವರಯ್ಯ ಎಂಬ ಗುತ್ತಿಗೆದಾರರು ಒಂದು ಕುಟುಂಬಕ್ಕೆ ತಲಾ ರೂ. 50 ಸಾವಿರದಿಂದ ಒಂದು ಲಕ್ಷ ಮುಂಗಡ ನೀಡಿರುವುದನ್ನು ತಿಳಿಸಿದ್ದಾರೆ. ಪ್ರತಿ ತಿಂಗಳು ಕಾರ್ಮಿಕರಿಗೆ ರೂ.5500 ಸಂಬಳ ನಿಗದಿ ಮಾಡಲಾಗಿದ್ದು ಮುಂಗಡ ನೀಡಿದ ಹಣ ವಾಪಸ್ಸಾತಿಗೆ ಸಂಬಳದಲ್ಲಿ ಕಡಿತಗೊಳಿಸಿ ತಮಗೆ ನೀಡುತ್ತಿದ್ದಾರೆ ಎಂದು ಕಾರ್ಮಿಕರು ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ “ಪ್ರತಿ ತಿಂಗಳು ಎರಡು ದಿನ ರಜೆ ನೀಡಲಾಗುತ್ತಿದ್ದು, ಕೆಲಸದ ದಿನಗಳಲ್ಲಿ ಉಚಿತ ಊಟ, ಉಪಹಾರ ನೀಡಲಾಗುತ್ತಿದೆ. ಕೆಲಸಕ್ಕೆ ಹೋಗದ ದಿನಗಳಲ್ಲಿ ಪ್ರತಿ ದಿನ ರೂ.100 ಕಡಿತ ಮಾಡುತ್ತಿರುವುದು, ಅವರನ್ನು ಅತಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುತ್ತಿರುವುದು, ಊರಿಗೆ ಹೋಗಲು ಅವಕಾಶ ಸಿಗುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಊರಿನ ಕಡೆ ಮುಖ ಮಾಡಿಲ್ಲ" ಎಂಬ ಇತ್ಯಾದಿ ಅಂಶಗಳನ್ನು ಜೀತ ಕಾರ್ಮಿಕರು ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ವಿ.ಪ್ರಸನ್ನ ಅವರು ತೆಲುಗು ಭಾಷೆಯಲ್ಲಿ ಸಂಭಾಷಣೆ ನಡೆಸಿ ಊರಿಗೆ ಹೋಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದಾಗ ಒಕ್ಕೊರಲಿನಿಂದ ಸಮ್ಮತಿಸಿದರು.
ಸಮ್ಮತಿ ವ್ಯಕ್ತಪಡಿಸಿದ ಕಾರ್ಮಿಕರನ್ನು ಉಪವಿಭಾಗಾಧಿಕಾರಿ ಪ್ರಸನ್ನ ಅವರು ಖಾಸಗಿ ವಾಹನದ ಮೂಲಕ ಸಾಗರದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಿ ಊಟೋಪಚಾರದ ವ್ಯವಸ್ಥೆಗೆ ಆದೇಶಿಸಿದರು. ಅಧಿಕಾರಿಗಳ ಮಿಂಚಿನ ದಾಳಿ ಮತ್ತು ನಂತರದ ಮಾನವೀಯ ಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.