ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂಸದೆ ಶೋಭಾ ಸೇರಿ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರ ತರಾಟೆ
ಕಳಸ, ಡಿ.16: ಗ್ರಾಪಂ ಚುನಾವಣಾ ಪ್ರಚಾರಕ್ಕೆಂದು ಹೋಬಳಿ ವ್ಯಾಪ್ತಿಯ ಜಾಂಬಳೆಗೆ ಗ್ರಾಮಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಖಾಸಗಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಗಮನ ಸೆಳೆದ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಬಿಜೆಪಿ ಪಕ್ಷದ ಮುಖಂಡರ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸುವ ಹಂತ ತಲುಪಿದ ಘಟನೆ ಬುಧವಾರ ವರದಿಯಾಗಿದೆ.
ಸಂಸದೇ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿ ಅವರು ಕಳಸದಿಂದ ಜಾಂಬಳೆ ಪ್ರದೇಶಕ್ಕೆ ಬರುತ್ತಾರೆ ಎಂದು ತಿಳಿದ ಗ್ರಾಮಸ್ಥರು ಮೊಬೈಲ್ ನೆಟ್‍ವರ್ಕ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಜಾಂಬಳೆ ನೋಟಿಪೈಡ್ ಏರಿಯಾವನ್ನು ಗ್ರಾಮ ಪಂಚಾಯತ್‍ಗೆ ಸೇರಿಸುವುದು, ಕೆಂಕನಕೊಂಡ ಮತ್ತು ಬಿಳಗಲ್ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೂಲನಿವಾಸಿಗಳ ಮೂಲಭೂತ ಸೌಲಭ್ಯ, ಅರಣ್ಯ ಒತ್ತುವರಿ ಸಮಸ್ಯೆ, ಮಕ್ಕಳ ಆನ್‍ಲೈನ್ ಶಿಕ್ಷಣ ಮುಂತಾದ ಸಮಸ್ಯೆಗಳ ಬಗ್ಗೆ ಸಂಸದರ ಬಳಿ ತಿಳಿಸಲು ಬುಧವಾರ ಜಾಂಬಳೆ ಗ್ರಾಮದಲ್ಲಿ ಸೇರಿದ್ದರು.
ಜನಪ್ರತಿನಿಧಿಗಳು ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮದಲ್ಲಿ ಬಿಎಸ್ಸೆನೆಲ್ ಇಂಟರ್ ನೆಟ್ ಸೌಲಭ್ಯ ಇಲ್ಲ. ಟವರ್ ನ ಬ್ಯಾಟರೀ ಕೂಡ ಇಲ್ಲ, ಇದರಿಂದ ವಿದ್ಯುತ್ ನಿಲುಗಡೆ ಸಂದರ್ಭದಲ್ಲಿ ಇಡೀ ಊರಿಗೆ ದೂರವಾಣಿ ಸೌಲಭ್ಯವೂ ಇರುವುದಿಲ್ಲ. ಆನ್‍ಲೈನ್ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಖಾಸಗಿ ಮೊಬೈಲ್ ಟವರ್ ನಿರ್ಮಾಣವಾದರೂ ಕೂಡ ಇನ್ನೂ ಗ್ರಾಹಕರಿಗೆ ಸೌಲಭ್ಯ ನೀಡುತ್ತಿಲ್ಲ, ಇದನ್ನು ಬಗೆಹರಿಸಿಕೊಡಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಟವರಿನಿಂದ ಹಾದು ಹೋಗುವ ಕೇಬಲ್ ಅರಣ್ಯ ಪ್ರದೇಶದಲ್ಲಿ ಹೋಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಆದ್ದರಿಂದ ನಮಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಗ್ರಾಮಸ್ಥರು ಸಿಟ್ಟಿಗೆದ್ದು ಸರಕಾರವೇ ನಿಮ್ಮದಿರುವಾಗ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಲು ಸಾದ್ಯವಿಲ್ಲವೇ? ನಿಮಗೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಮಗೂ ಕೂಡ ನಿಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಸಂಸದೆ ಹಾಗೂ ಶಾಸಕ ಕುಮಾರಸ್ವಾಮಿ, ಮೂಡಿಗೆರೆ ತಾಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಶೇಷಗಿರಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬೆಜಿಪಿ ಮುಖಂಡರಿಗೂ ಗ್ರಾಮಸ್ಥರಿಗೂ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ನೂಕಾಟ ತಳ್ಳಾಟಗಳು ನಡೆದವು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕುದುರೆಮುಖ ಕಂಪನಿ ಸಿಎಂಡಿಗೆ ತಿಳಿಸಿ ಬ್ಯಾಟರಿ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಖಾಸಗಿ ಟವರ್ ಬಗ್ಗೆ ಅದರ ಮುಖ್ಯಸ್ಥರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿ ತೆರಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತೇಜಸ್, ರಾಮಪ್ರಕಾಶ್, ಸುರೇಶ್ ಭಟ್, ಶಂಕರೇಗೌಡ, ಸುರೇಶ್, ಶ್ರೀಪಾಲಯ್ಯ, ಮಹೇಂದ್ರ ಇತರರು ಇದ್ದರು.