ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿದೆ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2020-12-17 12:22 GMT
Photo: Facebook

ಕಲಬುರಗಿ, ಡಿ.17: ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಯಾವುದೇ ಅನುದಾನವೂ ಬರುತ್ತಿಲ್ಲ. ಕಾಮಗಾರಿಗಳೂ ನಡೆಯುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಗುರುವಾರ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಮೈನಸ್ ಶೇ.70 ರಷ್ಟಾಗಿದೆ. ಹೈ-ಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮಾಡಲಾಯಿತು. ಆದರೆ, ಮಂಡಳಿಗೆ ಕಡಿಮೆ ಅನುದಾನವನ್ನು ಕೊಡಲಾಗಿದೆ. ಮತ್ತೊಂದು ಕಡೆ ಕೊಟ್ಟ ಅನುದಾನವನ್ನು ಬಳಕೆ ಮಾಡಿಲ್ಲ. ಈ ವರ್ಷದ ನವೆಂಬರ್ ತಿಂಗಳವರೆಗೆ 1500 ಕೋಟಿ ರೂಪಾಯಿಗಳ ಪೈಕಿ ರಾಜ್ಯ ಸರಕಾರ ಕೇವಲ 533 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಪೈಕಿ ಖರ್ಚಾಗಿರುವುದು ಕೇವಲ 48 ಕೋಟಿ ರೂಪಾಯಿ ಮಾತ್ರ ಎಂದರು.

ಇಷ್ಟೆಲ್ಲ ಇದ್ದರೂ ಕೆಕೆಆರ್‍ಡಿಬಿ ಅಧ್ಯಕ್ಷರು ಮಾತ್ರ ರಾಜ್ಯ ಸರಕಾರದಿಂದ ಭರಪೂರ ಅನುದಾನ ಬಂದಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದಾರೆ. ಶೇ.78 ರಷ್ಟು ಖರ್ಚು ಮಾಡಿಲ್ಲ ಅಂದರೆ ಮುಂದಿನ ಕಂತುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಇಷ್ಟಾದರೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೈ ಕೊಡವಿ ಮೇಲೇಳುತ್ತಿಲ್ಲ. ಕೆಕೆಆರ್‍ಡಿಬಿಗೆ ಕೇವಲ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಲಾಗಿದೆ. ಸಮಿತಿಯನ್ನೇ ನೇಮಕ ಮಾಡದೆ ಸರಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಇದೆಲ್ಲದರ ಕಾರಣದಿಂದಾಗಿ ಕೆಕೆಆರ್‍ಡಿಬಿ ಕೋಮಾ ಸ್ಥಿತಿಗೆ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮವಾಗಲಿದೆ ಎಂದರು.

ಕೆಕೆಆರ್‍ಡಿಬಿಗೆ ಅನುದಾನ ಕೊಡುತ್ತಿರುವುದು ಗ್ರಾಪಂಗಳಿಗೆ ಮನಸ್ಸಿಗೆ ಬಂದಂತೆ ಹಂಚಲು ಅಲ್ಲ. ಇದನ್ನು ಅರ್ಥ ಮಾಡಿಕೊಂಡು ರೇವೂರ ಹೇಳಿಕೆ ನೀಡಬೇಕು. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ

‘ಯಾವುದೇ ಗ್ರಾಪಂನಲ್ಲಿ ಎಲ್ಲ ಸ್ಥಾನಗಳೂ ಅವಿರೋಧವಾಗಿ ಆಯ್ಕೆಗೊಂಡಲ್ಲಿ 1 ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಪ್ರಕಟಿಸಿದ್ದಾರೆ. ಆದರೆ ಈ ರೀತಿ ಆಮಿಷವೊಡ್ಡುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ.’

ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News