×
Ad

ಸಿಐಡಿ ಡಿವೈಎಸ್ಪಿ ಲಕ್ಷ್ಮೀ ನಿಗೂಢ ಸಾವು ಪ್ರಕರಣ: ನಾಲ್ವರು ಪೊಲೀಸ್ ವಶಕ್ಕೆ

Update: 2020-12-17 19:18 IST

ಬೆಂಗಳೂರು, ಡಿ.17: ಅಪರಾಧ ತನಿಖಾ ದಳದ(ಸಿಐಡಿ) ಡಿವೈಎಸ್ಪಿ ಆಗಿದ್ದ ವಿ.ಲಕ್ಷ್ಮೀ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿನಗರ ಠಾಣಾ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕೋಣನಕುಂಟೆಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಲಕ್ಷ್ಮೀ ಅವರು ನಾಗರಬಾವಿಯ ವಿನಾಯಕ ಲೇಔಟ್‍ನ ಸ್ನೇಹಿತನ ಮನೆಗೆ ಬುಧವಾರ ರಾತ್ರಿ ತೆರಳಿದ್ದರು. ಅಲ್ಲಿಯೇ ಊಟ ಮಾಡಿ ಮಲಗಲು ಹೋದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಶಂಕಾಸ್ಪದವಾಗಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸುದ್ದಿ ತಿಳಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ಸಾವಿಗೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.

ನಾಲ್ವರು ವಶಕ್ಕೆ: ಮೃತ ಲಕ್ಷ್ಮೀ ತಂದೆ ವೆಂಕಟೇಶ್ ನೀಡಿದ ದೂರಿನನ್ವಯ ಮನು ಯಾನೆ ಮನೋಹರ್, ಪ್ರಜ್ವಲ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರ ತಂಡ ಐಪಿಸಿ ಸೆಕ್ಷನ್ 174(3) ಅಡಿ ಮೊಕದ್ದಮೆ ದಾಖಲು ಮಾಡಿದೆ ಎಂದು ವರದಿಯಾಗಿದೆ.

ಲಕ್ಷ್ಮೀ ಹಿನ್ನೆಲೆ: ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತರುವಾಲಟ್ಟಿ ಗ್ರಾಮ ನಿವಾಸಿಯಾಗಿರುವ ವಿ.ಲಕ್ಷ್ಮೀ, 2014ನೇ ಕೆಪಿಎಸ್ಸಿ ಬ್ಯಾಚ್ ಅಧಿಕಾರಿಯಾಗಿದ್ದರು. 2017ರಿಂದ ಸಿಐಡಿ ವಿಭಾಗದಲ್ಲಿಯೇ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು, 2012ನೇ ಸಾಲಿನಲ್ಲಿ ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನವೀನ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಎರಡು ವರ್ಷಗಳಿಂದ ದಂಪತಿ ನಡುವೆ ಜಗಳ ಶುರುವಾಗಿತ್ತು. ಅದೇ ಕಾರಣಕ್ಕೆ ಲಕ್ಷ್ಮಿ ಅವರು ನೊಂದಿದ್ದರು ಎನ್ನಲಾಗಿದೆ.

ಪ್ರಕರಣ ಸಂಬಂಧ ಲಕ್ಷ್ಮೀ ಅವರ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹಿಸಿರುವ ಪೊಲೀಸರು, ಆಕೆಯ ಸ್ನೇಹಿತೆ ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ನೇಣು ಬಿಗಿದುಕೊಂಡಿರುವ ಕೊಠಡಿಯಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಯಾರು ಮನೋಹರ್ ?

ಗುತ್ತಿಗೆದಾರನಾಗಿರುವ ಮನೋಹರ್, ವಿ.ಲಕ್ಷ್ಮೀಗೆ ಆಪ್ತನಾಗಿದ್ದ. ಬುಧವಾರ ರಾತ್ರಿಯೂ ಜತೆಗಿದ್ದ ಎನ್ನಲಾಗಿದೆ. ಇನ್ನು, ಈತ ಕೆಲ ಬಿಜೆಪಿ ಮುಖಂಡರಿಗೂ ಚಿರಪರಿಚಿತ ಎಂದು ತಿಳಿದುಬಂದಿದೆ.

ಖಿನ್ನತೆ ?

ತನ್ನ ಬ್ಯಾಚ್‍ನ ಇತರೆ ಮಹಿಳಾ ಅಧಿಕಾರಿಗಳು, ಸಿವಿಲ್ ವಿಭಾಗದಲ್ಲಿ ವರ್ಗಾವಣೆಗೊಂಡಿದ್ದರು. ತಾನೂ ಸಹ ಎಸಿಪಿಯಾಗಿ ಕಾರ್ಯನಿರ್ವಹಿಸಬೇಕೆಂದು ಕೋರಿ, ಕೆಲವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಹಿನ್ನೆಡೆಯಾದ ಕಾರಣ ಲಕ್ಷ್ಮೀ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಇಬ್ಬರ ಮೇಲೆ ಅನುಮಾನ

''ಬುಧವಾರ ನನ್ನ ಪುತ್ರಿ, ಮನು ಹಾಗೂ ಪ್ರಜ್ವಲ್ ಎಂಬವರ ಜೊತೆ ಸೇರಿ ಊಟ ಮಾಡಿದ್ದು, ತದನಂತರ, ಬಟ್ಟೆಯೊಂದನ್ನು ತೆಗೆದುಕೊಂಡು ಕೊಠಡಿಗೆ ತೆರಳಿ ಬಾಗಿಲು ಮುಚ್ಚಿದ್ದಾರೆ. ಆ ಬಳಿಕ ತುಂಬಾ ಹೊತ್ತು ಏನೂ ಸದ್ದು ಗದ್ದಲ ಇರಲಿಲ್ಲ. ಆಮೇಲೆ ನೋಡಿದರೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಳೆಂದು ಮನು ಹಾಗೂ ಪ್ರಜ್ವಲ್ ಹೇಳಿದ್ದಾರೆ. ಆದರೆ, ಈ ಇಬ್ಬರು ಸುಳ್ಳು ಹೇಳುತ್ತಿದ್ದು, ಇವರ ಮೇಲೆ ಅನುಮಾನ ಇದೆ. ಆದರೆ, ನನ್ನ ಪುತ್ರಿ ಲಕ್ಷ್ಮೀಗೆ ಯಾವುದೇ ವಿಷಯದಲ್ಲೂ ಸಮಸ್ಯೆ ಇರಲಿಲ್ಲ.

-ವೆಂಕಟೇಶ್, ಲಕ್ಷ್ಮೀ ತಂದೆ

ಗ್ರಾಮದಲ್ಲಿಯೇ ಅಂತ್ಯಕ್ರಿಯೆ

ಗುರುವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ಮಾಲೂರಿನ ಲಕ್ಷ್ಮೀ ಅವರ ಸ್ವಗ್ರಾಮ ತರುವಾಲಟ್ಟಿಯಲ್ಲಿಯೇ ಅಂತ್ಯಸಂಸ್ಕಾರ ನಡೆಯಿತು.

ಮನೋಸ್ಥೈರ್ಯ ತುಂಬಲು ಕಾರ್ಯಕ್ರಮ

ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮೀ ಸಾವಿನ ಪ್ರಕರಣದ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮನೋಸ್ಥೈರ್ಯ ತುಂಬಲು ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಪೊಲೀಸ್ ಸಿಬ್ಬಂದಿಗೆ ವೈಯಕ್ತಿಕ ಸಮಸ್ಯೆಗಳಿದ್ದರೂ ಬಗೆಹರಿಸಲು ಇಲಾಖೆಯಿಂದ ನೆರವು ನೀಡಲಾಗುವುದು.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News