×
Ad

ಕನ್ನಡದಲ್ಲಿ ಮಾಹಿತಿ ನೀಡದ ಬಗ್ಗೆ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಟ್ವೀಟ್: ಪ್ರತಿಕ್ರಿಯಿಸಿದ ‘ಇಂಡಿಗೊ ಏರ್‌ಲೈನ್ಸ್'

Update: 2020-12-17 20:36 IST

ಬೆಂಗಳೂರು, ಡಿ. 17: ಕನ್ನಡದಲ್ಲಿ ಮಾಹಿತಿ ನೀಡದ ‘ಇಂಡಿಗೊ ಏರ್‌ಲೈನ್ಸ್' ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರಿಗೆ ಇಂಡಿಗೊ ಏರ್‌ಲೈನ್ಸ್ ಪ್ರತಿಕ್ರಿಯೆ ನೀಡಿದ್ದು, 'ನಿಮ್ಮ ಪ್ರತಿಕ್ರಿಯೆಯನ್ನು ಸ್ವೀಕರಿಸಿ ಸಂಬಂಧಪಟ್ಟ ತಂಡಕ್ಕೆ ಹಂಚಿಕೊಳ್ಳಲಾಗುತ್ತದೆ' ಎಂದು ಮಾಹಿತಿ ನೀಡಿದೆ.

ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರು, ‘ಕರ್ನಾಟಕದಲ್ಲಿ ಇಂಡಿಗೊ ಹಾಗೂ ಇತರ ವಿಮಾನಯಾನ ಕಂಪೆನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆ ಏನು?’ ಟ್ವೀಟ್ ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಬೆಂಬಲ ಸೂಚಿಸಿದ್ದು, ‘ರಾಜ್ಯದಲ್ಲಿ ಸೇವೆ ನೀಡುವ ಎಲ್ಲ ವಿಮಾನಯಾನ ಕಂಪೆನಿಗಳು ಕನ್ನಡ ಭಾಷೆಯಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ನೀಡಬೇಕು' ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಇಂಡಿಗೊ ಏರ್‌ಲೈನ್ಸ್, ನೀವು ನಮ್ಮೊಂದಿಗೆ ಹಾರಾಟ ನಡೆಸುವಾಗ ನಮ್ಮ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕೆಂದು ನೀವು ಬಯಸುತ್ತೀರಿ. ಆದರೆ ಅದು ಕೆಲವೊಮ್ಮೆ ಸಂಭವಿಸಬಹುದು. ಆದರೆ, ಕಾರ್ಯಾಚರಣೆ ದೃಷ್ಟಿಯಿಂದ ಸಿಬ್ಬಂದಿ ಬೇರೆ ಬೇರೆ ರಾಜ್ಯಗಳ ನಡುವೆ ಹಾರಾಡುವ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ ಆಯಾ ರಾಜ್ಯಗಳ ಭಾಷೆಯಲ್ಲಿ ವಿವರಣೆ ನೀಡಲು ಆಗುವುದಿಲ್ಲ. ಈ ಕಾರಣಕ್ಕಾಗಿ ನಮ್ಮ ಸಿಬ್ಬಂದಿ ವಿಮಾನದಲ್ಲಿ ಎಸ್‌ಒಪಿ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ವಿವರಿಸುತ್ತಾರೆ. ಆದರೂ, ನಿಮ್ಮ ಪ್ರತಿಕ್ರಿಯೆಯನ್ನು ಸ್ವೀಕರಿಸಿ ಸಂಬಂಧಪಟ್ಟ ತಂಡಕ್ಕೆ ಹಂಚಿಕೊಳ್ಳಲಾಗುತ್ತದೆ'' ಎಂದು ಅತೀಕ್ ಅವರ ಟ್ವೀಟ್‍ಗೆ ಸ್ಪಂದಿಸಿದೆ.

ಈ ಮಧ್ಯೆ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿ ಎಲ್.ಕೆ. ಅತೀಕ್, ‘ವಿದೇಶಿ ವಿಮಾನಯಾನ ಸಂಸ್ಥೆಗಳಾದ ಬ್ರಿಟಿಷ್ ಏರ್‍ವೇಸ್, ಎಮಿರೇಟ್ಸ್, ಸಿಂಗಾಪುರ್ ಏರ್‌ಲೈನ್ಸ್ ಕನ್ನಡದಲ್ಲಿ ಸೇವೆ ನೀಡುತ್ತವೆ. ಇಂಡಿಗೊ ಸಿಬ್ಬಂದಿ ಕ್ಯಾಬಿನ್ ಸಿಬ್ಬಂದಿಯು ಇಂಗ್ಲಿಷ್, ಹಿಂದಿ ಬಳಸುವುದಾದರೆ, ಕನ್ನಡದಲ್ಲಿ ಸೇವೆ ನೀಡದಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಭಾಷೆಯಲ್ಲಿ ಮಾತನಾಡಿ: ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದರೆ ಕನ್ನಡ ಭಾಷೆಯಲ್ಲಿ ಸೇವೆ ನೀಡುವುದಲ್ಲದೆ, ಮೆನುಕಾರ್ಡ್ ಅನ್ನು ಕನ್ನಡ ಭಾಷೆಯಲ್ಲೆ ನೀಡುತ್ತಾರೆ. ಆದರೆ, ಬೆಂಗಳೂರಿನಿಂದ ಬೆಳಗಾವಿಗೆ ನಿತ್ಯ ಸಂಚರಿಸುವ ಇಂಡಿಗೊ ವಿಮಾನದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ಒದಗಿಸುತ್ತಿಲ್ಲ ಏಕೆ? ಎಂದು ಅತೀಕ್ ಅವರು ಪ್ರಶ್ನಿಸಿದರು.

ವಿಮಾನಯಾನ ಕಂಪೆನಿ ನನ್ನ ಭಾಷೆಯಲ್ಲಿ ಸೇವೆ ಒದಗಿಸಬೇಕು. ಜೊತೆಗೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ತಿಳಿದವರು, ಇಂಗ್ಲಿಷ್ ಮತ್ತು ಹಿಂದಿ ಗೊತ್ತಿಲ್ಲದ ಪ್ರಯಾಣಿಕರು ಏನು ಮಾಡಬೇಕು ಎಂದು ಕೇಳಿದ ಎಲ್.ಕೆ.ಅತೀಕ್ ಅವರು, ಕನ್ನಡ ಭಾಷೆ ಬಲ್ಲ ವ್ಯಕ್ತಿಯೊಬ್ಬರನ್ನು ಇಟ್ಟುಕೊಂಡು ಅನೌನ್ಸ್ ಮಾಡಿಸಲು ವಿಮಾನಯಾನ ಕಂಪೆನಿಗೆ ಯಾವುದೇ ಹೊರೆಯಾಗುತ್ತಿಲ್ಲ. ನಮ್ಮ ಭಾಷೆಯಲ್ಲಿ ಸೇವೆ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News