ಆ್ಯಮ್ನೆಸ್ಟಿಗೆ ಬ್ಯಾಂಕ್‍ನಿಂದ ಹಣ ವಾಪಸ್ ಪಡೆದುಕೊಳ್ಳಲು ಅನುಮತಿ ನೀಡಿದ ಹೈಕೋರ್ಟ್

Update: 2020-12-17 15:46 GMT

ಬೆಂಗಳೂರು, ಡಿ.17: ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಗೆ ತನ್ನ ಬ್ಯಾಂಕ್ ಖಾತೆಗಳಿಂದ ವೇತನ ಮತ್ತಿತರ ಚಟುವಟಿಕೆಗೆ 60 ಲಕ್ಷ ರೂ. ವಾಪಸ್ ಪಡೆದುಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ.

ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ಮಾನ್ಯ ಮಾಡಿ, ಸಂಸ್ಥೆಯ ಸಿಬ್ಬಂದಿಗೆ ವೇತನ ಮತ್ತಿತರ ಚಟುವಟಿಕೆಗೆ ಬ್ಯಾಂಕ್‍ನಿಂದ ಹಣ ಪಡೆದುಕೊಳ್ಳಲು ಅವಕಾಶ ನೀಡಿದೆ.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ, ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರು ವಾದಿಸಿ, ಮಾನವ ಹಕ್ಕುಗಳ ರಕ್ಷಣೆಗೆ ಆ್ಯಮ್ನೆಸ್ಟಿ ಕೆಲಸ ಮಾಡುತ್ತಿದೆ. ಇಂಥ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಸ್ಥಗಿತಗೊಳಿಸುವಂತೆ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದಾರೆ. ಇಡಿಯ ಈ ನಡೆ ಪಿಎಂಎಲ್‍ಎ ಹಾಗೂ ಎಫ್‍ಸಿಆರ್‍ಎ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದರಿಂದ ಸಂಸ್ಥೆಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿಲ್ಲ. ಅದಕ್ಕಾಗಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.

ಇಡಿ ಪರ ವಕೀಲರು, ಅರ್ಜಿದಾರರು ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಗೂ ಮೇಲ್ಮನವಿ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಬೇಕಿತ್ತು. ನೇರವಾಗಿ ಹೈಕೋರ್ಟ್ ಮುಂದೆ ದಾಖಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಿಲ್ಲ. ಸಂಸ್ಥೆ ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(ಎಫ್‍ಸಿಆರ್‍ಎ) ಉಲ್ಲಂಘಿಸಿ ಭಾರಿ ಮೊತ್ತದ ದೇಣಿಗೆ ಸಂಗ್ರಹಿಸಿದೆ. ಪಿಎಂಎಲ್‍ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News