×
Ad

ತಂಗಿಯ ಸಾವಿಗೆ ಪ್ರತೀಕಾರವಾಗಿ ಯುವಕನ ಕೊಲೆ: ಸಹೋದರ ಸೇರಿ 7 ಮಂದಿ ಬಂಧನ

Update: 2020-12-17 21:58 IST

ಶಿವಮೊಗ್ಗ, ಡಿ.17: ಪ್ರೀತಿಯ ಹೆಸರಿನಲ್ಲಿ ತಂಗಿಯ ಆತ್ಮಹತ್ಯೆಗೆ ಕಾರಣನಾಗಿ ಮತ್ತೊಬ್ಬಳೊಂದಿಗೆ ಮದುವೆಗೆ ಮುಂದಾಗಿದ್ದನೆನ್ನಲಾದ ಯುವಕನನ್ನು ಆಕೆಯ ಸಹೋದರ ಸೇರಿ ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ನಗರದ ಹರಿಗೆಯ ಕೆಇಬಿ ಕ್ವಾಟರ್ಸ್ ಬಳಿ ಕಾರ್ತಿಕ್ (24) ಎಂಬಾತನ‌ ಕೊಲೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರದ ಮೃತ ಯುವತಿಯ ಸಹೋದರ ಸೇರಿ ಏಳು ಜನರನ್ನು ಬಂಧಿಸಗಿದೆ. ಶಿವು ಕುಮಾರ್(24) ಸಂತೋಷ್( 24),ಮಂಜುನಾಥ್ ( 26 ), ಕಿರಣ್ ಕುಮಾರ್( 21), ಶರತ್ (26), ಕೃಷ್ಣಮೂರ್ತಿ (23) ಕರಣ್ (25) ಬಂಧಿತ ಆರೋಪಿಗಳು.

ಘಟನೆಯ ವಿವರ: ವಿದ್ಯಾನಗರದ ಯುವತಿ ಅಮೃತ ಹಾಗೂ ಗೋಪಾಲಗೌಡ ಬಡಾವಣೆಯ ಕಾರ್ತಿಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪ್ರೀತಿ ಹೆಸರಲ್ಲಿ ಸುತ್ತಾಡಿದ್ದ ಕಾರ್ತಿಕ್ ಬಳಿಕ ಮದುವೆಗೆ ನಿರಾಕರಿಸಿದ್ದ. ಜೊತೆಗೆ ಮದುವೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಇತ್ತೀಚಿನ ದಿನಗಳಿಂದ ಆಕೆಯಿಂದ ದೂರವಾಗಿದ್ದ ಕಾರ್ತಿಕ್ ಮತ್ತೊಂದು ಯುವತಿಯ ಜೊತೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದ ಎನ್ನಲಾಗಿದ್ದು, ಇದರಿಂದ‌ ನೊಂದ ಯುವತಿ ಅಮೃತ ಕಳೆದ ರವಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೂ ಮುನ್ನ ಯುವತಿ ಕಾರ್ತಿಕ್ ನೊಂದಿಗೆ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಳು. ಆದರೆ ನಿನಗೆ ಅನಾರೋಗ್ಯವಿದೆ. ಮದುವೆಯಾಗಲು ಸಾಧ್ಯವಿಲ್ಲ ಎಂದು ಕಾರ್ತಿಕ್ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ಪ್ರೀತಿಯ ವಿಚಾರ ಬಹಿರಂಗಪಡಿಸಿ ನಿಶ್ಚಯವಾಗಿರುವ ಮದುವೆಯನ್ನು ನಿಲ್ಲಿಸುವುದಾಗಿ ಹೆದರಿಸಿದ್ದಳು ಎನ್ನಲಾಗಿದೆ.

ಬಳಿಕ ಅಮೃತ ರವಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಬಳಿಕ ಆಕೆಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಕಾರ್ತಿಕ್ ಜೊತೆಗಿದ್ದ ಪೋಟೋಗಳು, ಆತನೊಂದಿಗೆ ಸಂಭಾಷಣೆ ನಡೆಸಿದ್ದ ಆಡಿಯೋ ತುಣುಕು ಸಿಕ್ಕಿದ್ದವು. ಸಹೋದರಿ ಸಾವಿಗೆ ಕಾರ್ತಿಕ್ ಕಾರಣ ಎಂದು ಮೃತ ಸಹೋದರಿಯ ಅಣ್ಣ ಕಾರ್ತಿಕ್ ನ ಕೊಲೆಗೆ ಸಂಚು ರೂಪಿಸಿ, ಕೆಇಬಿ‌ ಕ್ವಾಟರ್ಸ್ ಗೆ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಭೇದಿಸಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಿಗದಿಯಾಗಿತ್ತು ಮದುವೆ 
ಯುವತಿ ಅಮೃತನಿಂದ ದೂರವಾಗಿದ್ದ ಕಾರ್ತಿಕ್ ಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಕಾರ್ತಿಕ್ ಕುಟುಂಬದವರು ಕಾರ್ತಿಕ್ ಗೆ ಹೆಣ್ಣು ನೋಡಿ ನಿಶ್ಚಿತಾರ್ಥ ಕೂಡ ನಡೆಸಲಾಗಿತ್ತು. ಜ.1 ರಂದು ಸಾಗರದಲ್ಲಿ ಕಾರ್ತಿಕ್ ಗೆ ಮದುವೆ ನಿಗದಿಯಾಗಿತ್ತು. ಆದರೆ ಹಸೆಮಣೆ ಏರಬೇಕಾದ ಕಾರ್ತಿಕ್ ಕೊಲೆಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News