ಕೋಡಿಹಳ್ಳಿ ಚಂದ್ರಶೇಖರ್ ಆಸ್ತಿ ತನಿಖೆಗೆ ಶಾಸಕ ರೇಣುಕಾಚಾರ್ಯ ಒತ್ತಾಯ

Update: 2020-12-18 11:48 GMT

ಬೆಂಗಳೂರು, ಡಿ. 18: ರೈತರ ಹೆಸರಿನಲ್ಲಿ ದಲ್ಲಾಳಿ ಕೆಲಸ ಮಾಡುವ ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಕಲಿ ಹೋರಾಟಗಾರ. ಹಸಿರು ಶಾಲು ಹಾಕಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇವರ ಆಸ್ತಿಯ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮುಖಂಡ, ಹೋರಾಟಗಾರನೆಂದು ಹೇಳಿಕೊಳ್ಳುವ ಕೋಡಿಹಳ್ಳಿ ಚಂದ್ರಶೇಖರ್ ಭಾರೀ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಅವರಿಗೆ ಇಷ್ಟೊಂದು ಬೃಹತ್ ಆಸ್ತಿ ಎಲ್ಲಿಂದ ಬಂತು? ಅವರು ಆ ಆಸ್ತಿಯನ್ನು ಯಾವ ರೀತಿ ಸಂಪಾದಿಸಿದ್ದಾರೆ ಎಂಬುದು ಸೇರಿದಂತೆ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಒತ್ತಾಯಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಹೋರಾಟಗಾರನೆ ಅಲ್ಲ. ಅವನೊಬ್ಬ ನಕಲಿ. ರೈತರ ಹೆಸರಿನಲ್ಲಿ ದಲ್ಲಾಳಿ ಕೆಲಸ ಮಾಡುತ್ತಿದ್ದು, ರೈತರಿಗೆ ಮೋಸ ಮಾಡುತ್ತಿದ್ದಾನೆ. ಈತನನ್ನು ರಾಜ್ಯದ ರೈತರು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಮನವಿ ಮಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂದರ್ಭದಲ್ಲಿ ಈತ ಎಲ್ಲಿದ್ದ ಎಂದು ಏಕವಚನದಲ್ಲಿ ಪ್ರಶ್ನಿಸಿದರು.

ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಮೈಸೂರು, ಮಂಡ್ಯ ಸೇರಿ ರಾಜ್ಯದ ವಿವಿಧೆಡೆ ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ವೇಳೆ ಈ ನಕಲಿ ನಾಯಕ ರೈತ ಕುಟುಂಬದವರನ್ನು ಭೇಟಿಯಾಗಿ ಕನಿಷ್ಠ ಪಕ್ಷ ಒಂದು ಸಾಂತ್ವನವನ್ನು ಹೇಳಿದ್ದನ್ನು ನಾನು ನೋಡಲಿಲ್ಲ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಒಳ ಒಪ್ಪಂದಿಂದ ಲಾಭ: ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆಯೂ ತುಟಿ ಬಿಚ್ಚದ ಈ ನಕಲಿ ರೈತ ನಾಯಕ, ಆ ಸರಕಾರಗಳ ಜತೆ ಒಳ ಒಪ್ಪಂದ ಮಾಡಿಕೊಂಡು ದೊಡ್ಡ ಮೊತ್ತದ ಲಾಭ ಪಡೆದಿದ್ದಾರೆ ಎಂದು ರೇಣುಕಾಚಾರ್ಯ ಇದೇ ವೇಳೆ ಆರೋಪಿಸಿದರು.

ರೈತ ಹೋರಾಟಗಾರನೆಂದು ಹೇಳಿಕೊಳ್ಳುವ ಈತ ಬೆಂಗಳೂರಿನಲ್ಲಿ ದೊಡ್ಡ ಮನೆಯಲ್ಲಿದ್ದು,  ಕೋಡಿಹಳ್ಳಿಯಲ್ಲಿ ಈತನ ಹೆಸರಿನಲ್ಲಿ ಹಿಂದೆ ಇದ್ದದ್ದು ಕೇವಲ ಎರಡೂವರೆ ಎಕರೆ ಭೂಮಿ. ಇಂದು ಇವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಎಲ್ಲಿಂದ ಬಂತು. ಜಮೀನಿನಲ್ಲಿ ಬಿತ್ತಿ ಬೆಳೆದು ಹಣ ಮಾಡಿದ್ದಾರಾ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಡಿಹಳ್ಳಿ ಚಂದ್ರಶೇಖರ್ ರೈತರನ್ನು ಎತ್ತಿಕಟ್ಟುವ ನೀಚ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದ ರೇಣುಕಾಚಾರ್ಯ, ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ರೈತ ಪರವಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ರೈತ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ರೈತರು ತಮ್ಮ ಸಮಸ್ಯೆಗಳೇ ಇದ್ದರೂ ನೇರವಾಗಿ ಸರಕಾರದ ಮುಂದೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಕೋಡಿಹಳ್ಳಿ ಚಂದ್ರಶೇಖರ್ ಅಂತಹ ನಕಲಿ, ಡೋಂಗಿ ನಾಯಕರನ್ನು ನಂಬಿ ಯಾವುದೇ ಕಾರಣಕ್ಕೂ ಮೋಸ ಹೋಗುವುದು ಬೇಡ ಎಂದು ರೇಣುಕಾಚಾರ್ಯ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News