ಸಂಸದ ಮುನಿಸ್ವಾಮಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಎಸ್‍ಎಫ್‍ಐ ಕರೆ
ಬೆಂಗಳೂರು, ಡಿ.18: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿ ನಡೆದ ಘಟನೆಗೂ ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆಗೂ ಸಂಬಂಧವಿಲ್ಲದಿದ್ದರೂ ಸಂಸದ ಮುನಿಸ್ವಾಮಿ ರಾಜಕೀಯಪ್ರೇರಿತವಾಗಿ ವಿದ್ಯಾರ್ಥಿ ಸಂಘಟನೆಯ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿ ಎಸ್‍ಎಫ್‍ಐ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಎಸ್‍ಎಫ್‍ಐ ಸಂಘಟನೆ ಹೊರ ರಾಜ್ಯದ ಜನರನ್ನು ಕರೆಸಿಕೊಂಡು ದಾಂಧಲೆ ಮಾಡಿದೆ ಎಂದು ಕೋಲಾರದ ಸಂಸದ ಮುನಿಸ್ವಾಮಿ ರಾಜಕೀಯಪ್ರೇರಿತ ಆರೋಪ ಮಾಡಿ ನಿಷ್ಪಕ್ಷಪಾತ ತನಿಖೆಯನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಸಂಘಟನೆಯ ನಾಯಕನನ್ನು ಬಂಧಿಸಿದ್ದಾರೆ ಎಂದು ಎಸ್‍ಎಫ್‍ಐ ಆರೋಪಿಸಿದೆ.
ಎಸ್‍ಎಫ್‍ಐ ಯಾವುದೇ ಪ್ರತಿಭಟನೆಯನ್ನು ಸಂಘಟಿಸಿರಲಿಲ್ಲ. ಅಲ್ಲದೆ, ಇದೊಂದು ವಿದ್ಯಾರ್ಥಿ ಸಂಘಟನೆಯಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆಗಾಗಿ ಕೆಲಸ ಮಾಡಲಾಗುತ್ತಿದೆ. ಆದರೆ, ಸಂಸದರು ಸಂಘಟನೆಯ ಹೆಸರನ್ನು ಎಳೆದುತರುವ ಮೂಲಕ ಬೇಜವಾಬ್ದಾರಿತನ ತೋರಿದ್ದಾರೆ. ಬಿಜೆಪಿ ಹಾಗೂ ಆರೆಸ್ಸೆಸ್ ಆಣತಿಯಂತೆ ದುರುದ್ದೇಶಪೂರಿತವಾಗಿ ಹೇಳಿಕೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಸಂಘಟನೆಯ ನಾಯಕನನ್ನು ಬಂಧಿಸಿರುವುದು ಸರಿಯಲ್ಲ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಕಾರ್ಮಿಕರ ಕಾನೂನುಗಳನ್ನು ಉಲ್ಲಂಘಿಸಿ ಯುವಜನರಿಗೆ ಕಡಿಮೆ ಸಂಬಳ ನೀಡಿ 12 ಗಂಟೆಗಳ ಕಾಲ ದುಡಿಸಿಕೊಂಡು ನಾಲ್ಕೈದು ತಿಂಗಳಿಂದ ಸಂಬಳ ನೀಡದೆ ಸತಾಯಿಸಿ ಶೋಷಿಸುವುದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ಕೋಲಾರದ ಸಂಸದ ಮುನಿಸ್ವಾಮಿ, ಬಂಡವಾಳಶಾಹಿ ಕಂಪನಿಗಳ ಕಮೀಷನ್ ಪ್ರಭಾವಕ್ಕೆ ಒಳಗಾಗಿ ಕಾರ್ಮಿಕರ ಹಿತವನ್ನು ಮರೆತಿದ್ದಾರೆ. ಕಾರ್ಮಿಕರ ಶೋಷಣೆ ಮಾಡುತ್ತ ಕಾರ್ಪೋರೇಟ್ ಕುಳಗಳ ರಕ್ಷಣೆಗೆ, ಆಸ್ತಿ ಹೆಚ್ಚಳಕ್ಕೆ ಕೈಜೋಡಿಸಿದ್ದಾರೆ. ಸಂಘಟನೆಯ ಹೆಸರನ್ನು ದುರುದ್ದೇಶಪೂರ್ವಕವಾಗಿ ಎಳೆದು ತರುತ್ತಿರುವುದರ ಹಿಂದೆ ಆರೆಸ್ಸೆಸ್ ರಾಜಕೀಯ ಸೈದ್ಧಾಂತಿಕ ವಿರೋಧಿ ನಿಲುವೇ ಕಾರಣವಾಗಿದೆ. ಹೀಗಾಗಿ, ಸಂಸದ ಮುನಿಸ್ವಾಮಿ ಸಂಘಟನೆ ವಿರುದ್ಧ ಮಾಡಿರುವ ಆರೋಪವನ್ನು ಈ ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು ಮತ್ತು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಮಿಕರ ಹಿತ ಕಾಪಾಡಬೇಕೆಂದು ಎಸ್‍ಎಫ್‍ಐ ಪ್ರಕಟನೆಯಲ್ಲಿ ಆಗ್ರಹಿಸಿದೆ.