ಪಂಚಾಯತ್ ಸದಸ್ಯರ ಹರಾಜು ಪ್ರಕ್ರಿಯೆ: ಆರು ಜಿಲ್ಲೆಗಳಲ್ಲಿ ಪ್ರಕರಣ ದಾಖಲು

Update: 2020-12-18 16:40 GMT

ಬೆಂಗಳೂರು, ಡಿ.18: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುತ್ತಿರುವ ಪ್ರಕ್ರಿಯೆ ನಡೆದಿದ್ದು, ಇದುವರೆಗೂ ಆರು ಜಿಲ್ಲೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪಂಚಾಯತ್ ಸದಸ್ಯ ಸ್ಥಾನಗಳಿಗೆ ಹರಾಜಿನ ಮೂಲಕ ಆಯ್ಕೆಯಾಗುತ್ತಿರುವುದನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಖಚಿತವಾದ ಬಳಿಕ ಕೂಲಂಕಷವಾದ ವರದಿಯನ್ನು ಸಲ್ಲಿಸಿದ್ದು, ಆ ಬಳಿಕ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಗೆ ಸೂಚಿಸಲಾಗಿದೆ.

ಯಾವ ಜಿಲ್ಲೆಯಲ್ಲಿ ಪ್ರಕರಣ: ಬಳ್ಳಾರಿ ಜಿಲ್ಲೆಯ ಬೈಲೂರು ಗ್ರಾಮ, ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತ್‍ನ ವಾರ್ಡ್ ನಂ.1, ಕೋಲಾರ ಜಿಲ್ಲೆ ಹಾಗೂ ತಾಲೂಕಿನ ಮದೇರಿ ಪಂಚಾಯತ್ ವ್ಯಾಪ್ತಿಯ ಬೆದ್ಲಿ ಹಾಗೂ ಇಂಗಸಂದ್ರ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಪಂಚಾಯತ್ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಳಗುಲಿ ಗ್ರಾಮ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಪಂಚಾಯತ್ ವ್ಯಾಪ್ತಿಯ ಹೊಸಳ್ಳಿ ಇಜೆ ಕ್ಯಾಂಪ್‍ಗಳಲ್ಲಿ ತಲಾ ಒಂದೊಂದು ಪೊಲೀಸ್ ಪ್ರಕರಣಗಳು ದಾಖಲಾಗಿವೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಚುನಾವಣೆ ಮೂಲಕ ಆಯ್ಕೆಯಾಗಬೇಕಾದ ಸದಸ್ಯರನ್ನು ಹರಾಜು ಹಾಕುವ ಮೂಲಕ ಹಣವನ್ನು ನೀಡಿ, ಚುನಾವಣೆಗೆ ಸ್ಪರ್ಧಿಸದಂತೆ ಮಾಡಲಾಗಿದೆ. ಈ ಸಂಬಂಧ ತಾಲೂಕು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಸಿಂಧಿಗೇರಿ ಗ್ರಾಮ ಪಂಚಾಯತಿಯ 4 ಕ್ಷೇತ್ರಗಳ ಚುನಾವಣೆಯನ್ನು ಅಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News