ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸಿದ್ದರಾಮಯ್ಯ ನಿವಾಸದೆದುರು ಕಾರ್ಮಿಕರ ಧರಣಿ

Update: 2020-12-18 16:42 GMT

ಮೈಸೂರು,ಡಿ.18: ನಗರದ ಶಾರದದೇವಿ ನಗರದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಎದುರು ಐಟಿಸಿ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಾರ್ಖಾನೆ ಕಾರ್ಮಿಕರು, ಮೇಲಧಿಕಾರಿಗಳ ಕಿರುಕುಳ ವಿರುದ್ಧ ಹಾಗೂ ವಜಾಗೊಳಿಸಿರುವ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಐಟಿಸಿ ಕಾರ್ಖಾನೆ ವ್ಯವಸ್ಥಾಪಕ ರಾಜೇಂದ್ರ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.

ರೈತ ಮುಖಂಡ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಿದ್ದರಾಮಯ್ಯಗೆ ಮನವಿ ಮಾಡಿದರು. ಈ ಹಿಂದೆಯೂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಿದ್ದರು.

ಪ್ರತಿಭಟನಾ ನಿರತ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಹಾಗೂ ವಿದ್ಯಾಸಾಗರ್ ಸೇರಿದಂತೆ ಕಾರ್ಖಾನೆಯ 5 ಜನರನ್ನು ನಿವಾಸಕ್ಕೆ ಕರೆದು ಸಿದ್ದರಾಮಯ್ಯ ಮನವಿ ಸ್ವೀಕರಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕಾರ್ಮಿಕ ಉಪ ಆಯುಕ್ತ ತಮ್ಮಣ್ಣ ಉಪಸ್ಥಿತರಿದ್ದರು. ನಾಳೆ ಕಾರ್ಖಾನೆಯವರು ಹಾಗೂ ಕಾರ್ಮಿಕ ಉಪ ಆಯುಕ್ತರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ರವಿಕುಮಾರ್, ಮದನ್ ಕುಮಾರ್, ವಿದ್ಯಾಸಾಗರ್ ಟಿ.ಆರ್, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News