ಭೂ ಮಂಜೂರಾತಿ ನಿಯಮ-1969ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ ಸರಕಾರ

Update: 2020-12-18 16:50 GMT

ಬೆಂಗಳೂರು, ಡಿ. 18: ನಗರ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರಕಾರದ ನಿರುಪಯುಕ್ತ ಬಿ-ಕರಾಬು ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಲು ಹಾಗೂ ಗುತ್ತಿಗೆ ಆಧಾರದ ಮೇಲೆ ನೀಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಮಂಜೂರಾತಿ ನಿಯಮಗಳು-1969’ಕ್ಕೆ ತಿದ್ದುಪಡಿ ಮಾಡಿ ರಾಜ್ಯ ಸರಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಿಂದ 18 ಕಿ.ಮೀ. ಹಾಗೂ ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ. ವರೆಗಿನ ಬಿ-ಕರಾಬು ಭೂಮಿಯನ್ನು ಮಾರಾಟ ಮಾಡಲು ದರ ನಿಗದಿ ಮಾಡಿ ಆದೇಶಿಸಿದ್ದು, ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ದರಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ.

ಸಂಪುಟ ಸಭೆಯಲ್ಲಿ ಖರಾಬು ಭೂಮಿ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ನ.21ರಂದು ಈ ಕುರಿತ ಕರಡು ನಿಯಮಗಳನ್ನು ಪ್ರಕಟಿಸಿದ್ದ ಕಂದಾಯ ಇಲಾಖೆ ಡಿ.16ರಂದು ಕರ್ನಾಟಕ ಭೂ ಮಂಜೂರಾತಿ ನಿಯಮ -1969ರ 22-ಎ ಉಪನಿಯಮ 1ಕ್ಕೆ ತಿದ್ದುಪಡಿ ತಂದು ಅಂತಿಮ ನಿಯಮಾವಳಿ ಪ್ರಕಟಿಸಿದೆ.

ದರ ನಿಗದಿ: ಉದ್ಯಮ ಬಳಕೆಗಾಗಿ ಖರೀದಿಸುವವರಿಗೆ ಎಸ್ಸಿ-ಎಸ್ಟಿ ವರ್ಗದವರಿಗೆ ಮಾರ್ಗಸೂಚಿ ದರದ ಶೇ.50, ಉಳಿದ ವರ್ಗದವರಿಗೆ ಮಾರುಕಟ್ಟೆ ದರದಷ್ಟು ಪಾವತಿಸುವಂತೆ ನಿಗದಿ ಮಾಡಲಾಗಿದೆ. ಉಳಿದಂತೆ ಗುತ್ತಿಗೆ ಆಧಾರದ ಮೇಲೆ ನೀಡುವುದಾದರೆ ಎಸ್ಸಿ-ಎಸ್ಟಿ ಅರ್ಜಿದಾರರಿಗೆ ಮಾರ್ಗಸೂಚಿ ದರದ ಶೇ.2.5ರಷ್ಟು, ಇತರರಿಗೆ ಮಾರುಕಟ್ಟೆ ದರದ ಶೇ.2.5ರಷ್ಟು ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News