ಜ.1ರಿಂದ ತರಗತಿ ಆರಂಭ: ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲಿಸಲು ಸಚಿವ ಸುಧಾಕರ್ ಸೂಚನೆ

Update: 2020-12-19 12:12 GMT

ಬೆಂಗಳೂರು, ಡಿ.19: ರಾಜ್ಯ ಸರಕಾರ ಜ.1ರಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿ ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ನಡೆಸಲು ತೀರ್ಮಾನಿಸಿದೆ. ಈ ವೇಳೆ ಶಾಲೆ-ಕಾಲೇಜುಗಳ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳು, ಶಿಕ್ಷಕರು ಮನೆಯಿಂದ ಶಾಲೆಗೆ ಬರುವಾಗ, ಹೋಗುವಾಗ ಹಾಗೂ ಶಾಲೆಯ ಆವರಣದಲ್ಲಿ ಸರಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆ ಮೂಲಕ ಕೊರೋನ ಹರಡದಂತೆ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜಿಗೆ ಪ್ರವೇಶ ಪಡೆಯುವ 72ಗಂಟೆಗಳ ಅಂತರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿ, ಸೋಂಕು ಇಲ್ಲದಿರುವ ಬಗ್ಗೆ ವರದಿ ಸಲ್ಲಿಸಬೇಕು. ಈ ವೇಳೆ ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಮನೆಯಿಂದಲೇ ಯುಟ್ಯೂಬ್ ಮತ್ತು ಇತರೆ ಆನ್‍ಲೈನ್ ಮಾಧ್ಯಮಗಳಿಂದ ಅಭ್ಯಾಸ ಮಾಡಬಹುದುದೆಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News