ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಆರೋಪ: ಮಾಜಿ ಶಾಸಕನ ವಿರುದ್ಧ ಎಫ್ಐಆರ್

Update: 2020-12-19 13:41 GMT

ಬೆಂಗಳೂರು, ಡಿ. 19: ‘ಪೊಲೀಸ್ ಠಾಣೆಯಿಂದ ಹೊರಗೆ ಬಾ ನಿನ್ನನ್ನು ನೋಡುತ್ತೇನೆ’ ಎಂದು ಬೆದರಿಕೆ ಹಾಕಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಇಲ್ಲಿನ ಬಾಗಲಕೋಟೆ ಜಿಲ್ಲೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಕೊಲೆ ಪ್ರಕರಣವೊಂದರಲ್ಲಿ ತನ್ನ ಬೆಂಬಲಿಗರಿಗೆ ವಿಚಾರಣೆಗೆ ಹಾಜರಾಗಲು ಸಿಪಿಐ ಅಯ್ಯನಗೌಡ ವಿ.ಪಾಟೀಲ್ ನೋಟಿಸ್ ನೀಡಿದ್ದಕ್ಕೆ ಆಕ್ರೋಶಿತನಾದ ವಿಜಯಾನಂದ ಕಾಶಪ್ಪನವರ, ಪಾಟೀಲ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, 'ವಿಚಾರಣೆಗೆ ಸಹಕಾರ ನೀಡುವುದಿಲ್ಲ, ನೀವು ಏನು ಮಾಡ್ಕೋತ್ತೀಯಾ ಮಾಡ್ಕೋ' ಎಂದು ಬೆದರಿಕೆವೊಡ್ಡಿದ್ದರು ಎಂದು ಹೇಳಲಾಗಿದೆ.

ಈ ಪ್ರಕರಣ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 353, 504 ಹಾಗು 506 ಅಡಿಯಲ್ಲಿ ವಿಜಯಾನಂದ ಕಾಶಪ್ಪನವರ ಸೇರಿದಂತೆ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯ ಇಳಕಲ್ ನಾಗೂರು ರಸ್ತೆ ಬಳಿ ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಬಸವರಾಜ ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅಕ್ಟೋಬರ್ 27 ರಂದು ತಲೆಗೆ ಏಟು ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಆ ಹಿನ್ನೆಲೆಯಲ್ಲಿ ಕಾಶಪ್ಪನವರ ಬೆಂಬಲಿಗರಾದ ಮಂಜುನಾಥ ಗೊಂದಿ ಇಳಕಲ್, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಸ್.ಪಾಟೀಲ ಹಾಗೂ ಇತರರ ಮೇಲೆ ಕೇಸ್ ದಾಖಲಾಗಿತ್ತು. ಇವರನ್ನು ಬಂಧಿಸುವ ಮುನ್ನವೇ 11 ಜನ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರು. ಆ ಬಳಿಕ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಶಪ್ಪನವರು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದರು ಎಂದು ಹೇಳಲಾಗಿದೆ.

‘ಪೊಲೀಸ್ ಠಾಣೆಗೆ ನುಗ್ಗಿ ಸಿಪಿಐ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ಎಫ್‍ಐಆರ್ ದಾಖಲಿಸಿಕೊಂಡಿದ್ದು, ನಿಷ್ಪಕ್ಷ ತನಿಖೆ ನಡೆಸಲಾಗುವುದು’

-ಲೋಕೇಶ್ ಜಗಲಾಸರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಈ ಕುರಿತು ಮಾಜಿ ಶಾಸಕ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದು, ಇಳಕಲ್ ಪೊಲೀಸ್ ಠಾಣೆಯಲ್ಲಿ ನಾನು ಗಲಾಟೆ ಮಾಡಿಲ್ಲ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ. ನಾನು ಯಾವ ಅಧಿಕಾರಿಯ ಕರ್ತವ್ಯಕ್ಕೂ ಅಡ್ಡಿಪಡಿಸಿಲ್ಲ ಎಂದರು. ನಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಣೆ ಮಾಡುವುದು ನನ್ನ ಆದ್ಯ ಕರ್ತವ್ಯ. ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸಿ, ಜೈಲಿಗೆ ಹಾಕುತ್ತೇನೆ ಅಂದಾಗ ನಾನು ರಕ್ಷಣೆಗೆ ಹೋಗಿದ್ದೀನೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ವಿನಂತಿಸಿದರೂ ಪೊಲೀಸರು ನಿರಾಕರಣೆ ಮಾಡಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News