ತಾಕತ್ತಿದ್ದರೆ ಬೆನ್ನಿಗೆ ಚೂರಿ ಹಾಕಿದವರನ್ನು ಬಹಿರಂಗಪಡಿಸಲಿ: ಸಿದ್ದುಗೆ ಈಶ್ವರಪ್ಪ ಸವಾಲು

Update: 2020-12-19 12:45 GMT
ಫೈಲ್ ಚಿತ್ರ

ಶಿವಮೊಗ್ಗ, ಡಿ.19: ಕಾಂಗ್ರೆಸ್ ಪಕ್ಷದ ಆಂತರಿಕ ಕಲಹಕ್ಕೆ ಸಿದ್ದರಾಮಯ್ಯ ನಿನ್ನೆ ಗುದ್ದಲಿ ಪೂಜೆ ಮಾಡಿದ್ದು ಇನ್ನೂ ಬಹಳಷ್ಟು ಆರೋಪ-ಪ್ರತ್ಯಾರೋಪ ಹೊರಬರಲಿವೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದು, ತಾಕತ್ತಿದ್ದರೆ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋಲಬೇಕಿತ್ತು ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಬಳಿಕ ತಮ್ಮ ಸೋಲಿನ ಕಾರಣ ಹುಡುಕುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸಗಳನ್ನು ಮಾಡಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಾಣುತ್ತಿರಲಿಲ್ಲ. ತಮ್ಮ ಸೋಲಿಗೆ ಈಗ ಚಿಂತೆ ಮಾಡುತ್ತಿರುವ ಅವರು, ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್ ಹಾಗೂ ಶಾಸಕರ ಸೋಲು ಕಂಡಾಗ ಏಕೆ ಚಿಂತಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷ ನನ್ನ ತಾಯಿ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು, ಖರ್ಗೆ ಮತ್ತು ಪರಮೇಶ್ವರ ಮತ್ತು ಇತರೆ ನಾಯಕರು ಸೋತಾಗ  ನೆನಪಿಸಿಕೊಳ್ಳದೇ ತನ್ನ ಸೋಲಿಗೆ ಕಾರಣರಾದ ನಾಯಕರು ಬೇಕಾದರೆ ಪಕ್ಷದಲ್ಲಿ ಇರಬಹುದು, ಇಲ್ಲ ಪಕ್ಷ ಬಿಟ್ಟುಹೋಗಬಹುದು ಎಂದು ಹೇಳಿದ್ದಾರೆ. ನೀವು ಸೋತಾಗ ಪಕ್ಷ ನೆನಪಾಗುತ್ತದೆಯೇ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಪ್ರಬುದ್ದ ನಾಯಕತ್ವದ ಲಕ್ಷಣ ಇಲ್ಲ. ನಾವೇನು ಜಾತಿವಾದಿನಾ..? ಜೈಲಿಗೆ ಹೋಗಿಬಂದಿದ್ದೇನಾ..? ಎಂದು ವೇದಿಕೆ ಮೇಲೆ ಭಾಷಣ ಮಾಡಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ನನ್ನ ಸೋಲಿಗೆ ಪಕ್ಷದ ನಾಯಕರೇ ಎಂದು ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಎಲ್ಲ ಅಧಿಕಾರವನ್ನು ನೀಡಿದ್ದರೂ ಸಹ ಸಿದ್ದರಾಮಯ್ಯ ಅವರಿಗೆ ಆ ಪಕ್ಷದ ನಾಯಕರ ಮೇಲೆ ನಂಬಿಕೆ ಇಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿತ್ತು. ಬಳಿಕ ಮುಖ್ಯಮಂತ್ರಿಯನ್ನಾಗಿ, ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಈಗ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಮಾಡಿದೆ. ಇಷ್ಟಿದ್ದರೂ ಕೂಡ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸವಿಲ್ಲ ಎನ್ನುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ದುರಂಹಕಾರದ ಮಾತನಾಡುತ್ತಾ, ಇಡೀ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ಹೊರಟಿದ್ದಾರೆ. ತಾವು ಸೋತಿರುವುದು ಜನರ ತೀರ್ಪಿನಿಂದ ಎಂದು ಎಲ್ಲಿಯೂ ಹೇಳುತ್ತಿಲ್ಲ ಎಂದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಇಲ್ಲವೇ, ತಮ್ಮ ಸಂಸ್ಕೃತಿ ಇದೇ ಎಂದು ಒಪ್ಪಿಕೊಳ್ಳಬೇಕು ಎಂದರು.

ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿರುವ ಜಾತಿವಾರು ಸಮೀಕ್ಷೆ ವರದಿಯನ್ನು ಈಗ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ವರದಿ ಬಿಡುಗಡೆಗೆ ಆಗ್ರಹಿಸುತ್ತಿರುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ, ದಲಿತರ, ಹಿಂದುಳಿದವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ಎಲ್ಲ ಚುನಾವಣೆಯಲ್ಲೂ ಸೋಲು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಬಿಜೆಪಿ ಇನ್ನೂ ಪ್ರಬಲ ಪಕ್ಷವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News