×
Ad

ಆರ್ಥಿಕ ಸಂಕಷ್ಟ: ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಶಗುಪ್ತಾಗೆ ನೆರವಾದ ಗ್ರಾಮಸ್ಥರು

Update: 2020-12-19 19:07 IST

ವಿಜಯಪುರ, ಡಿ.19: ಎಂಬಿಬಿಎಸ್ ಓದಿ ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಶಗುಪ್ತಾ ಮುಹಮ್ಮದ್ ಶಾಪುರ್ಕರ್ ಎಂಬ ಬಡ ಕುಟುಂಬದ ಯುವತಿಗೆ ಗ್ರಾಮಸ್ಥರು ಸೇರಿ ಆರ್ಥಿಕ ಸಹಾಯ ಮಾಡಿದ್ದು, ಜಾತಿ ಮತದ ಭೇದವಿಲ್ಲದೆ ನೆರವಿಗೆ ಧಾವಿಸಿದ ವಿಜಯಪುರ ಜಿಲ್ಲೆಯ ತಾಳಿಕೋಟೆಯ ನಿವಾಸಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಟಿಪ್ಪು ನಗರದ ನಿವಾಸಿಯಾಗಿರುವ ಶಗುಪ್ತಾ ಮುಹಮ್ಮರ್ ಶಾಪುರ್ಕರ್ ಎಂಬ ವಿದ್ಯಾರ್ಥಿನಿಯು NEET ಪರೀಕ್ಷೆಯಲ್ಲಿ 720 ಅಂಕಗಳಿಗೆ 514 ಅಂಕಗಳನ್ನು ಪಡೆದು ಎರಡನೇ ಸುತ್ತಿನ ಆಯ್ಕೆಯಲ್ಲಿ ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಳು. ಆದರೆ ಅಡ್ಮಿಷನ್ ಮಾಡಲು ಆಕೆಗೆ ತನ್ನ ಕುಟುಂಬದ ಆರ್ಥಿಕ ಸ್ಥಿತಿ ಅಡ್ಡಿಯಾಗಿತ್ತು. ಇದನ್ನು ಮನಗಂಡ ತಾಳಿಕೋಟೆ ನಿವಾಸಿಗಳು ಶಗುಪ್ತಾಳಿಗೆ ಆರ್ಥಿಕ ಸಹಾಯ ಮಾಡಿದ್ದು, ಆಕೆಯ ಕನಸನ್ನು ಮತ್ತೆ ಚಿಗುರುವಂತೆ ಮಾಡಿದ್ದಾರೆ.

ತಾಳಿಕೋಟೆ ಮುಸ್ಲಿಂ ಸಮಾಜದಿಂದ ಸುಮಾರು 1.5 ಲಕ್ಷ ರೂ, ಕುಚುಕು ಗೆಳೆಯರ ಬಳಗ, ಫ್ರೆಂಡ್ಸ್ ಫಾರೆವೆರ್, ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರು ಸೇರಿ 1 ಲಕ್ಷ 40 ಸಾವಿರ ರೂ. ಒಗ್ಗೂಡಿಸಿ ಒಟ್ಟು 2.9 ಲಕ್ಷ ರೂ. ಗಳನ್ನು ಶಗುಪ್ತಾಳಿಗೆ ನೀಡಿದ್ದಾರೆ. ಅಲ್ಲದೇ, ವಸತಿ ಖರ್ಚು, ಊಟದ ಖರ್ಚು ಸೇರಿ ಇನ್ನಿತರ ಖರ್ಚುಗಳನ್ನು ಭರಿಸುವ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ತಾಳಿಕೋಟಿ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗದೇವರ ಅವರ ನೇತೃತ್ವದಲ್ಲಿ ಶಗುಪ್ತಾಳಿಗೆ ಸನ್ಮಾನ ಮಾಡಿ, ನಗದು ಹಂಚಿದ್ದಾರೆ. ಈ ಸಂದರ್ಭ ಮಾತನಾಡಿದ ಪೀಠಾಧಿಪತಿ ಸಿದ್ಧಲಿಂಗದೇವರ ಅವರು, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಯಾವುದೇ ಜಾತಿ ಮತ ಪಂಥ ಇರುವುದಿಲ್ಲ. ಅವರಲ್ಲಿರುವ ವಿದ್ಯೆಯನ್ನು ನೋಡಿ ನಾವು ಸಹಾಯಧನ ಮಾಡಬೇಕೇ ಹೊರತು ಜಾತಿಯನ್ನು ನೋಡಿ ಮಾಡಬಾರದೆಂದು ಹೇಳಿದರು.

ಈ ಸಂದರ್ಭದಲ್ಲಿ ಮನ್ಸೂರ್ ಇಬ್ರಾಹಿಂ, ಮೆಹಬೂಬ್ ಚೋರಗಸ್ತಿ, ಆನಂದ್ ಮದರಕಲ್, ಶ್ರೀಶೈಲ್ ಸಜ್ಜನ್, ಸಿದ್ದು ಅಸ್ಕಿ, ಜೈಸಿಂಗ್ ಮೂಲಿಮನಿ, ಮೌಲಾನಾ ಸಾಬ್ ಶೇಖ್ ಬಾಬುಸಾಬ್ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News