ಹಂಪಿ ಕನ್ನಡ ವಿವಿ ನೆರವಿಗೆ ಧಾವಿಸುವಂತೆ ಆಗ್ರಹ: ಟ್ವಿಟರ್ ನಲ್ಲಿ #ಕನ್ನಡವಿವಿಉಳಿಸಿ ಟ್ರೆಂಡಿಂಗ್
ಬೆಂಗಳೂರು, ಡಿ.19: ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸರಕಾರ ನೆರವಿಗೆ ಧಾವಿಸಬೇಕಿದೆ. ಈ ಕುರಿತಂತೆ #ಕನ್ನಡವಿವಿಉಳಿಸಿ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.
ವಾರ್ಷಿಕವಾಗಿ ವಿವಿಗೆ ಸುಮಾರು 5 ಕೋಟಿ ರೂ.ಗಳಷ್ಟು ಅಭಿವೃದ್ಧಿ ಅನುದಾನ ಬರುತ್ತದೆ. ಅದು ಸಿಬ್ಬಂದಿಯ ವೇತನ ಪಾವತಿ ಮಾಡಲಿಕ್ಕಾಗಿಯೇ ಸೀಮಿತವಾಗಿದೆ. ಅನ್ಯ ಕಾರ್ಯಕ್ರಮ, ಯೋಜನೆ ಹಮ್ಮಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಯ ಅನುದಾನದಲ್ಲೂ ಸರಕಾರ ಭಾರಿ ಕಡಿತ ಮಾಡುತ್ತ ಬಂದಿದೆ. ಸತತ ಎರಡು ವರ್ಷ ನೆರೆಯಿಂದ ರಾಜ್ಯದಲ್ಲಿ ಅಪಾರ ನಷ್ಟ ಉಂಟಾಗಿದೆ. ಈ ವರ್ಷ ಕೋವಿಡ್ ಲಾಕ್‍ಡೌನ್‍ನಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಕಾರಣಗಳನ್ನು ಕೊಟ್ಟು ಸರಕಾರ ಅನುದಾನಕ್ಕೆ ಕತ್ತರಿ ಹಾಕಿದೆ.
ಸರಕಾರದಿಂದ 2020-21 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ 50 ಲಕ್ಷ ಅಭಿವೃದ್ಧಿ ಅನುದಾನ ಮಂಜೂರಾಗಿದೆ. ಅದರಲ್ಲಿ 12.50 ಲಕ್ಷವಷ್ಟೇ ಬಿಡುಗಡೆಯಾಗಿದ್ದು, ಹಲವು ಕಾರಣಗಳನ್ನಿಟ್ಟುಕೊಂಡು ಸರಕಾರ ಅನುದಾನವನ್ನು ಕಡಿಮೆ ಮಾಡುತ್ತಿದೆ. ಆದುದರಿಂದ ವಿವಿಯು ವರ್ಷದಿಂದ ವರ್ಷಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಹಲವಾರು ಜನರು #ಕನ್ನಡವಿವಿಉಳಿಸಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್: ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಯಾಗದಿರುವುದರಿಂದ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕೇಳಿ ತೀವ್ರ ಆಘಾತವಾಗಿದೆ. ಕುಲಪತಿಗಳು ಸರಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆ ಮಾಡುವಂತೆ ಅಂಗಲಾಚುತ್ತಿರುವುದು ನೋಡಿದರೆ ಸರಕಾರಕ್ಕೆ ಕನ್ನಡಕ್ಕಾಗಿ ದುಡಿಯುತ್ತಿರುವ ಮತ್ತು ಕನ್ನಡ ಜ್ಞಾನವನ್ನು ವಿಸ್ತರಿಸುತ್ತಿರುವ ಸಂಸ್ಥೆಗಳ ಕುರಿತು ಎಂತಹ ನಿರ್ಲಕ್ಷ್ಯ ಭಾವನೆ ಇದೆ ಎಂದು ಅರ್ಥವಾಗುತ್ತದೆ. ಹಿಂದಿನ ವರ್ಷ 4-5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಈ ವರ್ಷ 50 ಲಕ್ಷ ಮೀಸಲಿರಿಸಲಾಗಿದೆ. ಅದರಲ್ಲೂ ಅರ್ಧದಷ್ಟು ಬಿಡುಗಡೆ ಮಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಅಥವಾ ದುರಂತದ ಸಂಗತಿ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.