×
Ad

ರೈತರ ಪ್ರತಿಭಟನೆ ಎರಡನೆ ಸ್ವಾತಂತ್ರ್ಯ ಸಂಗ್ರಾಮ: ವಿ.ಎಸ್.ಉಗ್ರಪ್ಪ

Update: 2020-12-19 21:16 IST

ಬೆಂಗಳೂರು, ಡಿ.19: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೆ ಸ್ವಾತಂತ್ರ್ಯ ಸಂಗ್ರಾಮದಂತೆ ಭಾಸವಾಗುತ್ತಿದೆ. ಬ್ರಿಟಿಷರ ವಿರುದ್ಧ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು. ಇದೀಗ ಅದಾನಿ, ಅಂಬಾನಿ ವಿರುದ್ಧ ಎರಡನೆ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ರೈತರ ಹೋರಾಟಕ್ಕೆ ಸ್ಪಂದಿಸಿ ತಕ್ಷಣ ಈ ಕಾಯ್ದೆಗಳನ್ನು ಹಿಂಪಡೆಯಬೇಕು. ಅದನ್ನು ಬಿಟ್ಟು ಪ್ರತಿಪಕ್ಷಗಳ ಮೇಲೆ ಅನಗತ್ಯ ಆರೋಪಗಳನ್ನು ಹೊರಿಸುವ ಪ್ರಯತ್ನ ಮಾಡುವುದು ಬೇಡ ಎಂದರು.

ರೈತರ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರರಾಗಿದ್ದಾರೆ. ಕೇಂದ್ರ ಸರಕಾರದ ಕಾಯ್ದೆಗಳ ವಿರುದ್ಧ ಒಂದು ಕೋಟಿ ಗೂ ಹೆಚ್ಚು ರೈತರು ಬೀದಿಗಿಳಿದು ರಾಷ್ಟ್ರ ರಾಜಧಾನಿ ದಿಲ್ಲಿಯ ಸುತ್ತಮುತ್ತ ಕಳೆದ 25 ದಿನಗಳಿಂದ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ಸುಪ್ರೀಂಕೋರ್ಟ್ ಸ್ಪಂದಿಸಿ, ಕೃಷಿ ಸಂಬಂಧಿಸಿದ ಮೂರು ಕಾಯ್ದೆಗಳನ್ನು ತಡೆಹಿಡಿಯುವಂತೆ ಸಲಹೆ ನೀಡಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅವರು ಕಿಡಿಗಾರಿದರು.

ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಪ್ರಧಾನಿ ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಕಾಯ್ದೆಗಳ ಬಗ್ಗೆ ರೈತರು ವ್ಯಕ್ತಪಡಿಸುತ್ತಿರುವ ಆತಂಕದ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರ ವಿಶೇಷ ಸಮಿತಿಯನ್ನು ರಚಿಸಬಹುದಿತ್ತು. ಆದರೆ, ಇದ್ಯಾವುದನ್ನು ಕೇಂದ್ರ ಸರಕಾರ ಮಾಡಿಲ್ಲ. ಈಗ ರೈತರನ್ನು ಮಾತುಕತೆಗೆ ಕರೆಯುತ್ತಿದ್ದಾರೆ. ಸುಪ್ರೀಂಕೋರ್ಟ್ ಬಗ್ಗೆ ಕೇಂದ್ರ ಸರಕಾರಕ್ಕೆ ಗೌರವವಿದ್ದರೆ ಮೊದಲು ಈ ಮೂರು ಕಾಯ್ದೆಗಳನ್ನು ತಡೆಹಿಡಿದು, ಸಮಸ್ಯೆ ಪರಿಹಾರಕ್ಕೆ ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ಉಗ್ರಪ್ಪ ಹೇಳಿದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಬೆಂಗಳೂರು ಮುಖಂಡರ ಸಭೆ ಮಾಡಿ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇವೆ. ಸರಕಾರ ಬಿಬಿಎಂಪಿ ವಾರ್ಡುಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದೆ. ಹಾಲಿ ಇದ್ದ 198 ವಾರ್ಡುಗಳಿಗೆ ಅಥವಾ ಹೊಸದಾಗಿ ರಚಿಸಿದ 243 ವಾರ್ಡುಗಳಿಗೆ ಚುನಾವಣೆ ನಡೆಸಿದರೂ ನಾವು ಸಿದ್ಧವಿದ್ದೇವೆ. ಆದಷ್ಟು ಬೇಗ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಈ ಹಿಂದೆ ಬಿಜೆಪಿಯವರು 8500 ಕೋಟಿ ರೂ.ಸಾಲ ಹೊರಸಿದ್ದರು. ಟಿಡಿಆರ್ ಹಗರಣ ಮಾಡಿಹೋಗಿದ್ದರು. ಈಗ ಜನರ ಮೇಲೆ ಒಂದೊಂದೇ ತೆರಿಗೆ ಹಾಕುತ್ತಿದ್ದಾರೆ. ಕೋವಿಡ್‍ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೈದರಾಬಾದ್‍ನಲ್ಲಿ ಶೇ.50ರಷ್ಟು ತೆರಿಗೆಯನ್ನು ಕಡಿತ ಮಾಡಲಾಗಿದೆ. ಅದೇ ರೀತಿ ಬಿಬಿಎಂಪಿಯಲ್ಲಿಯೂ ತೆರಿಗೆಯನ್ನು ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ನೆರವು ನೀಡಬೇಕು. ಮನೆ ಕಟ್ಟುವವರಿಗೂ ತೊಂದರೆಯಾಗುತ್ತಿದೆ. ಕಸದ ಮೇಲೆ ತೆರಿಗೆ ಹಾಕುವುದರಿಂದ ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಪಿ.ಆರ್.ರಮೇಶ್ ಉಪಸ್ಥಿತರಿದ್ದರು.

ಗುರುವಾರ ಬಿಬಿಎಂಪಿ ಚಲೋ

ಜನಸಾಮಾನ್ಯರಿಗೆ ಬಿಬಿಎಂಪಿ ವಿಧಿಸುತ್ತಿರುವ ತೆರಿಗೆಗಳು, ಜನವಿರೋಧಿ ನೀತಿಗಳು, ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಗುರುವಾರ ಪಕ್ಷದ ವತಿಯಿಂದ ಬಿಬಿಎಂಪಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News