ಆನಂದ್ ತೇಲ್ತುಂಬ್ಡೆಯ ಸತ್ಯ, ಪ್ರಾಮಾಣಿಕತೆ ಸರಕಾರದ ಕಣ್ಣು ಚುಚ್ಚುತ್ತಿದೆ: ದೇವನೂರ ಮಹಾದೇವ

Update: 2020-12-19 15:48 GMT

ಬೆಂಗಳೂರು, ಡಿ.19: ಹಿರಿಯ ಚಿಂತಕ ಹಾಗೂ ಬರಹಗಾರ ಆನಂದ್ ತೇಲ್ತುಂಬ್ಡೆ ಅವರ ಸತ್ಯ, ಪ್ರಾಮಾಣಿಕತೆ ಹಾಗೂ ಸಂಶೋಧನೆಯ ಪ್ರಖರತೆ ಸರಕಾರದ ಕಣ್ಣು ಚುಚ್ಚುವಂತಾಗಿದೆ. ಹೀಗಾಗಿ ಅವರನ್ನು ವಿನಾಕಾರಣ ಬಂಧಿಸಿ ಜೈಲಿನಲ್ಲಿಡಲಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಿಸಿದ್ದಾರೆ.

ಶನಿವಾರ ಪುಸ್ತಕ ಪ್ರೀತಿ ಹಾಗೂ ಕ್ರಿಯಾ ಪ್ರಕಾಶನ ವೆಬಿನಾರ್ ಮೂಲಕ ಆಯೋಜಿಸಿದ್ದ ಲೇಖಕ ಅಬ್ದುಲ್ ರೆಹಮಾನ್ ಪಾಷ ಅನುವಾದಿಸಿರುವ ಮಹಾಡ್ ಮೊದಲ ದಲಿತ ಬಂಡಾಯ ಮತ್ತು ಮಹಾಡ್ ಕೆರೆ ಸತ್ಯಾಗ್ರಹ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಹಾಡ್ ಹೋರಾಟದ ಕುರಿತು ಚಿಂತಕ ಆನಂದ್ ತೇಲ್ತುಂಬ್ಡೆ ಬರೆದಿರುವ ಮುನ್ನುಡಿ ರೂಪದಲ್ಲಿರುವ ಪುಸ್ತಕವು ಹತ್ತು ಉತ್ಕೃಷ್ಟ ಪಿಎಚ್‍ಡಿ ಗ್ರಂಥಗಳಿಗಿಂತಲೂ ಹೆಚ್ಚು ಅಮೂಲ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾಡ್ ಮೊದಲ ದಲಿತ ಬಂಡಾಯ ಮತ್ತು ಮಹಾಡ್ ಕೆರೆ ಸತ್ಯಾಗ್ರಹ ಕೃತಿಗಳು ದಲಿತರು ನಡೆಸಿದ ಚಾರಿತ್ರಿಕ ಹೋರಾಟವೊಂದನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ಸೂಕ್ಷ್ಮವಾದ ಒಳನೋಟಗಳೊಂದಿಗೆ ಆನಂದ್ ತೇಲ್ತುಂಬ್ಡೆ ವಿವರಿಸಿದ್ದಾರೆ. ಈ ಕೃತಿಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಬಲ್ಲದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮಹಾಡ್ ಕೆರೆ ಸತ್ಯಾಗ್ರಹ ಹೋರಾಟವು ಕೇವಲ ಒಂದು ಸ್ಥಳದ ಹೋರಾಟವಲ್ಲ. ಶತಮಾನಗಳಿಂದ ಸವರ್ಣಿಯರಿಂದ ಅಸ್ಪೃಶ್ಯತೆಗೆ ಒಳಗಾಗಿದ್ದ ದಲಿತ ಸಮುದಾಯ ತಮ್ಮ ಹಕ್ಕುಗಳಿಗಾಗಿ ನಡೆಸಿದ ಚಾರಿತ್ರಿಕ ಹೋರಾಟವಾದ ಬಗೆಯನ್ನು ಆನಂದ್ ತೇಲ್ತುಂಬ್ಡೆ ಈ ಕೃತಿಗಳಲ್ಲಿ ವಿವರಿಸಿದ್ದಾರೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಮಹಾಡ್ ಕೆರೆ ಹೋರಾಟವನ್ನು ಆನಂದ್ ತೇಲ್ತುಂಬ್ಡೆ ಹತ್ತು ಹಲವು ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ಅಂಬೇಡ್ಕರ್ ರೂಪಿಸಿದ ಹೋರಾಟದ ಸ್ವರೂಪದಿಂದ ಭವಿಷ್ಯದಲ್ಲಿ ದಲಿತ ಚಳವಳಿಗೆ ಯಾವ ರೀತಿಯಲ್ಲಿ ಪ್ರಭಾವ ಬೀರಿತು. ಅಂಬೇಡ್ಕರ್ ತಮ್ಮ ಹೋರಾಟದ ಸ್ವರೂಪವನ್ನು ಬದಲಿಸಿದ್ದರೆ ಯಾವ ರೀತಿಯಲ್ಲಿ ಬದಲಾವಣೆ ಕಾಣಬಹುದಾಗಿತ್ತು ಎಂಬುದರ ಕುರಿತು ಚರ್ಚಿಸಿದ್ದಾರೆ. ಇದು ಈಗಿನ ದಲಿತ ಹೋರಾಟಗಾರರಿಗೆ ಮಾರ್ಗದರ್ಶಿ ಆಗಬಹುದೆಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಲೇಖಕ ಅಬ್ದುಲ್ ರೆಹಮಾನ್ ಪಾಷ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ದಲಿತ ಹೋರಾಟಗಾರರಾದ ಡಾ.ಡಿ.ಜಿ.ಸಾಗರ್, ಮೋಹನ್‍ರಾಜ್, ಲಕ್ಷ್ಮೀನಾರಾಯಣ ನಾಗವಾರ, ಮಾವಳ್ಳಿ ಶಂಕರ್, ಗೋಪಾಲಕೃಷ್ಣ ಅರಳಹಳ್ಳಿ, ಡಾ.ರತಿರಾವ್, ಗುರುಪ್ರಸಾದ್ ಕೆರಗೋಡು ಮತ್ತಿತರರಿದ್ದರು.

ಜನಪರ ಹೋರಾಟಗಳನ್ನು ಕೇವಲ ಏಕಮುಖಿ ಸಿದ್ಧಾಂತದ ಮೂಸೆಯಿಂದ ನೋಡದೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೀರಿ, ಜನಪರ ಆಶಯಗಳಿಗಾಗಿ ನಡೆಯುವ ಹೋರಾಟಗಳನ್ನು ಸಕಾರಾತ್ಮಕವಾಗಿ ಮೌಲ್ಯೀಕರಣ ಮಾಡಬೇಕಾಗಿದೆ. ಆಗ ಮಾತ್ರ ಐಕ್ಯ ಹೋರಾಟವನ್ನು ಸಶಕ್ತವಾಗಿ ಮುನ್ನಡೆಸಲು ಸಾಧ್ಯ.

-ಬಂಜಗೆರೆ ಜಯಪ್ರಕಾಶ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News