×
Ad

ಜ.1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ: ನಗದು ಪಾವತಿ ಪಥದಲ್ಲಿ ಸಂಚಾರ ಬಂದ್

Update: 2020-12-19 21:25 IST

ಬೆಂಗಳೂರು, ಡಿ.19: ದೇಶದಾದ್ಯಂತ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ ಬಳಿಕ, ಇದೀಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ವರ್ಷದಿಂದ ಟೋಲ್‍ಪ್ಲಾಜಾಗಳಲ್ಲಿ ನಗದು ಪಾವತಿ ಪಥ ರದ್ದು ಮಾಡಲಾಗುತ್ತಿದ್ದು, ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಮೂಲಕವೇ ಶುಲ್ಕ ಪಾವತಿಸಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸಲು ಫಾಸ್ಟ್ಯಾಗ್ ಕಡ್ಡಾಯ ಮಾಡಿದರೂ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ವಾಹನ ಮಾಲಕರು ಹೊಸ ವರ್ಷದಿಂದ ಟೋಲ್ ಪ್ಲಾಜಾ ದಾಟುವುದು ಕಷ್ಟವಾಗಲಿದೆ. 2021ರ ಜನವರಿ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿ ಪಥ ರದ್ದು ಮಾಡಲಾಗುತ್ತಿದ್ದು, ಫಾಸ್ಟ್ಯಾಗ್ ಮೂಲಕವೇ ಶುಲ್ಕ ಪಾವತಿಸಬೇಕಿದೆ.

ಟೋಲ್‍ಪ್ಲಾಜಾಗಳಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಸೇರಿ ಇನ್ನಿತರ ಕಾರಣಗಳಿಂದಾಗಿ 2020 ರ ಜನವರಿ 15 ರಿಂದ ಟೋಲ್ ಶುಲ್ಕವನ್ನು ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಿ, ಕಡ್ಡಾಯ ಮಾಡಲಾಗಿತ್ತು. ಆದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದವರಿಗಾಗಿ ಟೋಲ್‍ಪ್ಲಾಜಾಗಳಲ್ಲಿ ಪ್ರತ್ಯೇಕ ಪಥವನ್ನು ನಿಗದಿ ಮಾಡಲಾಗಿತ್ತು.

ಆ ಮೂಲಕ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೂ, ನಗದು ಪಾವತಿಸಿ ಸಂಚರಿಸುವ ನಿಯಮವನ್ನು ಜಾರಿ ಮಾಡಿ, ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಲಾಗುತ್ತಿತ್ತು. ಇದೀಗ, ಸರಕಾರವು ಎಲ್ಲ ಕಡೆಗಳಲ್ಲಿ ಕಡ್ಡಾಯ ಫಾಸ್ಟ್‌ಟ್ಯಾಗ್ ಜಾರಿಗೆ ಮುಂದಾಗಿದ್ದು, ಜ. 1 ರಿಂದ ಎಲ್ಲ ಫಥಗಳನ್ನು ಫಾಸ್ಟ್‌ಟ್ಯಾಗ್ ಪಥವನ್ನಾಗಿ ಮಾಡಲಾಗುತ್ತಿದೆ.

ಶೇ. 10-15 ವಾಹನಗಳಲ್ಲಿಲ್ಲ ಫಾಸ್ಟ್‌ಟ್ಯಾಗ್: ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ದೇಶದಲ್ಲಿ ಫಾಸ್ಟ್‌ಟ್ಯಾಗ್ ಖರೀದಿ ಹೆಚ್ಚಳವಾಗಿದೆ. ಮೊದಲಿಗೆ 15 ಲಕ್ಷದಷ್ಟಿದ್ದ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆ ಇದೀಗ 2 ಕೋಟಿಗೂ ಹೆಚ್ಚಿದೆ. ಆದರೆ ಇನ್ನೂ ಶೇ. 10ರಿಂದ 15 ವಾಹನಗಳು ಫಾಸ್ಟ್‌ಟ್ಯಾಗ್ ವ್ಯಾಪ್ತಿಗೆ ಒಳಪಡಬೇಕಿವೆ. ಅಂತಹ ವಾಹನಗಳು ಈಗಲೇ ಫಾಸ್ಟ್‌ಟ್ಯಾಗ್ ಖರೀದಿಸಿ, ನೋಂದಣಿ ಮಾಡಿಕೊಳ್ಳಬೇಕಿದೆ.

ಪಾವತಿಸಬೇಕಾಗುತ್ತದೆ ದುಪ್ಪಟ್ಟು ಶುಲ್ಕ: ಟೋಲ್‍ಪ್ಲಾಜಾಗಳಲ್ಲಿ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿ ವ್ಯವಸ್ಥೆ ರದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ವಾಹನವೂ ಫಾಸ್ಟ್‌ಟ್ಯಾಗ್ ಪಥದಲ್ಲಿಯೇ ಸಂಚರಿಸಬೇಕಿದೆ. ಒಂದು ವೇಳೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ನಿಯಮದಂತೆ ದುಪ್ಪಟ್ಟು ಶುಲ್ಕ ಪಾವತಿಸಿ ಟೋಲ್‍ಪ್ಲಾಜಾಗಳ ಮೂಲಕ ತೆರಳಬೇಕಿದೆ.

ಟೋಲ್ ಶುಲ್ಕ ವಸೂಲಿಯಲ್ಲಿ ಹೆಚ್ಚಳ: ಫಾಸ್ಟ್‌ಟ್ಯಾಗ್ ಕಡ್ಡಾಯ ಆದೇಶ ಜಾರಿ ನಂತರ ಟೋಲ್ ಶುಲ್ಕ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ಫಾಸ್ಟ್‌ಟ್ಯಾಗ್ ಮುನ್ನ ದೇಶಾದ್ಯಂತ ಪ್ರತಿದಿನ ಸರಾಸರಿ 70 ಕೋಟಿ ರೂ. ಟೋಲ್ ಶುಲ್ಕ ವಸೂಲಿ ಆಗುತ್ತಿತ್ತು. ಆದರೀಗ ಅದು ಸರಾಸರಿ 92 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2021ರ ಜನವರಿಯಿಂದ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News