×
Ad

ಈ ಮಹಿಳಾ ಅಭ್ಯರ್ಥಿ ಗ್ರಾ.ಪಂ. ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತಾರೆ ಗೊತ್ತೇ ?

Update: 2020-12-19 22:32 IST

ತುಮಕೂರು, ಡಿ.19: ಮೊದಲ ಹಂತದ ಗ್ರಾಮ ಪಂಚಾಯತ್‌ ಚುನಾವಣೆಯ ಮತದಾನಕ್ಕೆ ಎರಡೇ ದಿನ ಬಾಕಿ ಇರುವಾಗ ಹೆಬೂರು ಗ್ರಾಮ ಪಂಚಾಯತ್ ಗೆ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಮಂಗಳಮ್ಮ ಅವರ ಕರಪತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆಯ ಮೊದಲ ಹಂತವಾದ ಡಿಸೆಂಬರ್‌ 22 ನಡೆಯಲಿರುವ ಚುನಾವಣೆಯಲ್ಲಿ ಹೆಬ್ಬೂರು ಗ್ರಾಮ ಪಂಚಾಯತ್‌‌ನ 7 ನೇ ಕಲ್ಕೆರೆ ಕ್ಷೇತ್ರದಿಂದ ಸ್ಫರ್ಧಿಸಿರುವ ಗಂಗಮ್ಮ ಹೆಚ್‌ ತಮ್ಮ ಚುನಾವಣಾ ಪ್ರಣಾಳಿಕೆ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಮಾತ್ರ ಏನು ಮಾಡುತ್ತೇನೆ ಎಂದು ಮಾತ್ರವಲ್ಲದೆ, ಸೋತರೆ ಏನು ಮಾಡುತ್ತೇನೆ ಎಂದು ಕೂಡಾ ಘೋಷಿಸಿದ್ದಾರೆ.

ತಾನು ಗೆದ್ದರೆ ಮಾಡಿಸುವ ಕೆಲಸಕ್ಕಿಂತ ಸೋತರೆ ಏನು ಮಾಡುತ್ತೇನೆ ಎಂಬ ಘೋಷಣೆಯಲ್ಲೇ ಅವರು ಅಚ್ಚರಿ ಮೂಡಿಸಿದ್ದಾರೆ. ತಾನು ಸೋತರೆ ''‌ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿಯನ್ನು ರದ್ದು ಮಾಡಿಸುವುದು, ಸರಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ ಮೈತ್ರಿ, ಮನಸ್ವಿನಿ, ವಿಧವಾ ವೇತನ ಹಣವನ್ನು ನಿಲ್ಲಿಸುವುದು, ಸರ್ವೇ ನಂ. 86 ರಲ್ಲಿ ಹಳೇ ದಾಖಲೆಯಂತೆ ಸ್ವಶಾನ ಮಾಡಿಸುವುದು, ಕಲ್ಕೆರೆ ಗ್ರಾಮದ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಹೋರಾಟ ಮಾಡವುದು'' ಎಂದಿದ್ದಾರೆ.

ಜೊತೆಗೆ ತನ್ನ ಆಶ್ವಾಸನೆಗೆ ಅವರು ಸಾಕ್ಷಿಯಾಗಿ, ಅಕ್ರಮವಾಗಿ ಕಾನೂನಿಗೆ ವಿರುದ್ಧವಾಗಿದ್ದ 6 ಮನೆಗಳ ಬಿಲ್ ನಿಲ್ಲಿಸಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಣಾಳಿಕೆಯ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇವರು ಗೆಲ್ಲುವುದಕ್ಕಿಂತ ಸೋಲುವುದೇ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News