×
Ad

ಕೆಪಿಎಸ್‌ಸಿ: ಡಿ.22ರ ಪರೀಕ್ಷೆ ಮುಂದೂಡಿಕೆ

Update: 2020-12-19 23:26 IST

ಬೆಂಗಳೂರು, ಡಿ.19: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳಿಗೆ ನಡೆಯುತ್ತಿರುವ ಮುಖ್ಯಪರೀಕ್ಷೆಯ ಪೈಕಿ ಡಿ.22ರಂದು ನಡೆಯಲಿರುವ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ಮುಂದೂಡಿದೆ. ಈ ದಿನದ ಪರೀಕ್ಷೆಯನ್ನು ಡಿ.28 ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಡಿ.22ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ನಡೆಯುತ್ತಿದ್ದು, ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಸರಕಾರಿ ನೌಕರರಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದರು. ಪರೀಕ್ಷೆ ಮುಂದೂಡುವಂತೆ ಚುನಾವಣಾ ಆಯೋಗವೂ ನಿರ್ದೇಶನ ನೀಡಲಾಗಿತ್ತು.

ಅಭ್ಯರ್ಥಿಗಳು ಸರಕಾರಿ ನೌಕರರಾಗಿದ್ದು, ಮತದಾನ ಅಥವಾ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಸಂಬಂಧಿತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರುಪಡಿಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದಲ್ಲಿ, ಅವರಿಗೆ ಮತದಾನ ಅಥವಾ ಮತ ಎಣಿಕೆ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.

ಡಿ.22ರ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿದೆ. ಡಿ.21, 23 ಮತ್ತು 24 ರಂದು ನಿಗದಿಯಾಗಿದ್ದ ಪತ್ರಿಕೆಗಳ ಪರೀಕ್ಷೆಗಳು ಅದೇ ವೇಳಾಪಟ್ಟಿಯಂತೆ ನಡೆಯಲಿವೆ. ಮುಂದೂಡಲಾಗಿರುವ ಪತ್ರಿಕೆಯ ಪರೀಕ್ಷೆ ಮಾತ್ರ ಡಿ.28ಕ್ಕೆ ಜರುಗಲಿದೆ ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಸಿ.ಎಲ್. ಲೀಲಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News