ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಹುನ್ನಾರ: ನಳಿನ್ ಕುಮಾರ್ ಆರೋಪ

Update: 2020-12-20 13:49 GMT

ಬೆಂಗಳೂರು, ಡಿ.20: ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇಲ್ಲದ ವೇಳೆ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದ್ದು, ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ರವಿವಾರ ನಗರದ ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರೈತರ ಹೆಸರಿನಲ್ಲಿ ಗಲಭೆ ರಾಜಕಾರಣ ಮಾಡುತ್ತಿದೆ. ರೈತರ ರಕ್ಷಣೆ ಮಾಡುವುದಕ್ಕೆ ಬದಲು ಅವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ದೂರಿದರು. ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಿಎಎ ಗೆ ಸಂಬಂಧಿಸಿ ಗಲಭೆಗಳನ್ನು ಸೃಷ್ಟಿಸಿತು. ಬೆಂಕಿ ಹಾಕುವ ಕಾಂಗ್ರೆಸ್ ಯತ್ನ ಫಲ ಕೊಡಲಿಲ್ಲ ಎಂದು ಟೀಕಿಸಿದರು.

ಎನ್‍ಡಿಎ ಸರಕಾರ ಜಾರಿ ಮಾಡಿರುವ ರೈತರ ಪರ ಯೋಜನೆಗಳ ವಿವರವನ್ನು ಮನೆ ಮನೆಗೆ ತಲುಪಿಸಬೇಕು. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಕ್ಕೆ ಮುಂಚಿತವಾಗಿ ಎಲ್ಲರ ಮನೆಗಳಿಗೂ ಕರ ಪತ್ರಗಳನ್ನು ಹಂಚಬೇಕು. ಅಂದು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಳಿನ್ ಹೇಳಿದರು.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿಸಿದ್ದೂ ಕಾಂಗ್ರೆಸ್‍ನವರೇ ಎಂದು ಆರೋಪಿಸಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆ ಇಲ್ಲ. ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ನವರೇ ಗದ್ದಲ ನಡೆಸಿದ್ದು. ಇವೆಲ್ಲಾ ಕೃತ್ಯಗಳಿಗೆ ಜನರ ಬಳಿ ಕ್ಷಮೆ ಕೇಳಬೇಕು ಎಂದು ಕಟೀಲ್ ಒತ್ತಾಯಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ಸಿದ್ದರಾಮಯ್ಯ ಕೊಡವರು ಮತ್ತು ಹಿಂದುಳಿದವರನ್ನು ಅಪಮಾನ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ವೋಟ್ ಬ್ಯಾಂಕ್ ಓಲೈಕೆಗಾಗಿ ಕೊಡವ ಸಮಾಜವನ್ನು ಅವಮಾನಿಸಿದ್ದಾರೆ. ಅವರು ಕೊಡವ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಗ್ರಾಮ ಪಂಚಾಯತ್ ಸಭೆಯಲ್ಲಿ ಶೇ 80 ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ. 1,16,000 ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News