ಸಂವಿಧಾನದ ಅರಿವಿರುವವರು ಗೋಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸಲ್ಲ: ಸಿ.ಟಿ. ರವಿ
ಚಿಕ್ಕಮಗಳೂರು, ಡಿ.20: ಸಂವಿಧಾನದ ಬಗ್ಗೆ ಯಾರಿಗೆ ಶ್ರದ್ಧೆ ಮತ್ತು ತಿಳುವಳಿಕೆ ಇರುತ್ತದೆಯೋ ಅವರು ಗೋಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಗೋಹತ್ಯೆ ನಿಷೇದದ ಬಗ್ಗೆ ಸಂವಿಧಾನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರ ನಂತರ 1964ರಲ್ಲಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸದ್ಯ ಈ ಕಾಯ್ದೆಯನ್ನು ರಾಜ್ಯ ಸರಕಾರ ಮತ್ತಷ್ಟು ಬಲಗೊಳಿಸಿದೆ ಎಂದ ಅವರು, 1964ರಲ್ಲಿ ಜನಸಂಘ, ಬಿಜೆಪಿ ಆಡಳಿತದಲ್ಲಿ ಇರಲಿಲ್ಲ, 1950-51ರಲ್ಲಿ ಸಂವಿಧಾನದಲ್ಲಿ ಈ ಕಾಯ್ದೆ ಸೇರಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲಹೆ ನೀಡಿದ್ದು, ಬಿಜೆಪಿ ಅಲ್ಲ, ಮೋದಿಯೂ ಅಲ್ಲ, ಈ ದೇಶದ ಸಂಸ್ಕೃತಿ, ಜಾನುವಾರುಗಳ ಪ್ರಾಮುಖ್ಯತೆಯಿಂದಾಗಿ ಅಂಬೇಡ್ಕರ್ ಗೋ ಹತ್ಯೆ ನಿಷೇದ ಕಾಯ್ದೆಯನ್ನು ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದರು.
ಗೋವು ಎಲ್ಲಾ ರೀತಿಯಿಂದಲೂ ದೇಶಕ್ಕೆ ಬಲ ನೀಡಿದೆ. ನಮ್ಮ ಜೀವನ ಗೋವಿನೊಂದಿಗೆ ಸಮ್ಮಿಲನಗೊಂಡಿದೆ. ಹಾಗಾಗಿ ಸಂವಿಧಾನದಲ್ಲಿ ಗೋಹತ್ಯೆ ನಿಷೇದದ ಪ್ರಸ್ತಾಪ ಮಾಡಲಾಗಿದೆ. ಕಾಂಗ್ರೆಸ್‍ನವರು ಇತಿಹಾಸವನ್ನು ಮರೆತಿದ್ದಾರೆ. ಈಗಿರುವ ಕಾಂಗ್ರೆಸ್‍ಗೂ ಹಿಂದಿನ ಕಾಂಗ್ರೆಸ್‍ಗೂ ಸಂಬಂಧವಿಲ್ಲ. ಜೋಡೆತ್ತು ಅವರ ಪಕ್ಷದ ಗುರುತಾಗಿತ್ತು. ಹಸು ಕರು ಆ ಪಕ್ಷದ ಗುರುತಾಗಿತ್ತು. ಯಾವ ಪಕ್ಷ ಹಸುವಿನ ಗುರುತು ಇಟ್ಟುಕೊಂಡಿತ್ತೋ ಆ ಪಕ್ಷ ಗೋಹತ್ಯೆ ನಿಷೇದದ ಬಗ್ಗೆ ಈಗ ಆಕ್ಷೇಪ ಎತ್ತುತ್ತಿದೆ ಎಂದು ಸಿ.ಟಿ.ರವಿ ಟೀಕಿಸಿದರು.
ಕಾಂಗ್ರೆಸ್‍ನವರು ಆಹಾರ ಪದ್ಧತಿ ಬಗ್ಗೆ ಮಾತನಾಡುತ್ತಿದ್ದಾರೆ. ಸಮುದ್ರದ ಕೆಲ ಮೀನುಗಳಿಗೆ ಮನುಷ್ಯರನ್ನು ತಿನ್ನುವ ಸಂಪ್ರದಾಯವಿದೆ. ನಾಳೆ ಮನುಷ್ಯರನ್ನೇ ತಿನ್ನುವುದನ್ನು ಆಹಾರ ಪದ್ಧತಿ ಎಂದರೆ ಸಿದ್ದರಾಮಯ್ಯ ಅವರು ಈ ವಾದವನ್ನು ಬೆಂಬಲಿಸುತ್ತಾರಾ?, ಸಿದ್ದರಾಮಯ್ಯ ಅವರ ಕುಲದೈವ ಬೀರೇಶ್ವರ ಸ್ವಾಮಿ ಅವರು ಗೋಹತ್ಯೆಯನ್ನು ಸಮರ್ಥನೆ ಮಾಡುತ್ತಾರಾ?, ಬೀರೇಶ್ವರನಾ ವಾಹನ ಯಾವುದು ಎಂದು ಸಿದ್ದರಾಮಯ್ಯ ತಿಳಿದುಕೊಳ್ಳಲಿ. ಇದರಿಂದ ಇವರ ಮೂಲ ಸಂಸ್ಕೃತಿ ಯಾವುದು, ಓಟಿಗಾಗಿ ಇರುವ ಸಂಸ್ಕೃತಿ ಯಾವುದು ಎಂದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.