×
Ad

ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಕಾರಣ: ಶಾಸಕ ಜಿ.ಟಿ. ದೇವೇಗೌಡ

Update: 2020-12-20 20:30 IST

ಮೈಸೂರು,ಡಿ.20: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಕಾರಣ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಆರೋಪಿಸಿದರು.

ಮಾಜಿ ಮುಖ್ಯಮಂತ್ರಿಗಳ ಪರಸ್ಪರ ವಾಗ್ವಾದ ಕುರಿತು ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ. ಮೈತ್ರಿ ಸರ್ಕಾರ ಬೀಳುತ್ತದೆ ಅಂತ ಗೊತ್ತಿದ್ದರೂ ಕುಮಾರಸ್ವಾಮಿ ಅಮೆರಿಕಾಗೆ ಹೋಗಿ ಕುಳಿತುಕೊಂಡರು. ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು. ಮನಸ್ಸು ಮಾಡಿದ್ದರೆ ಅದನ್ನು ಸಿದ್ದರಾಮಯ್ಯ ತಡೆಯಬಹುದಿತ್ತು. ಆದರೆ ತಡೆಯುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಬೀಳುವುದಕ್ಕೆ ಇಬ್ಬರೂ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಮನಸ್ಸಿನ ನೋವನ್ನು ಹೇಳಿಕೊಡಿದ್ದಾರೆ. ಈ ಮೊದಲು ವರುಣ,  ಚಾಮುಂಡೇಶ್ವರಿ ಒಂದೇ ಕ್ಷೇತ್ರವಾಗಿತ್ತು. ತಾಲ್ಲೂಕು ಬೋರ್ಡ್ ಮೆಂಬರ್ ನಿಂದ ಹಿಡಿದು ಉಪಮುಖ್ಯಮಂತ್ರಿ ಆಗುವವರೆಗೆ ಚಾಮುಂಡೇಶ್ವರಿ ಕ್ಷೆತ್ರದಲ್ಲೇ ಇದ್ದರು. ವರುಣ ಕ್ಷೇತ್ರ ಉದಯವಾದ ನಂತರ ಅಲ್ಲಿಗೆ ಹೋಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಬಯಸಿದ್ದರು. ಆದರೆ, ಜನ ಅವರನ್ನು ಕೈ ಹಿಡಿಯಲಿಲ್ಲ. ನೀವೆ ನನ್ನನ್ನು ಕೈ ಬಿಟ್ಟಿರಿ ಎಂದು ಕಾರ್ಯಕರ್ತರ ಬಳಿ ನೋವನ್ನು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಜಾ.ದಳ-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದೆವು ಎಂಬ ಆರೋಪಕ್ಕೆ ಉತ್ತರಿಸಿ, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 8 ಸಾವಿರ ಮತಗಳನ್ನು ಪಡೆದಿತ್ತು. ಆಗ ಹೇಮಂತ್ ಕುಮಾರ್ ಗೌಡ ಅಭ್ಯರ್ಥಿಯಾಗಿದ್ದರು. 2018 ರ ಚುನಾವಣೆಯಲ್ಲಿ ಗೋಪಾಲ್ ರಾವ್ ಅಭ್ಯರ್ಥಿಯಾಗಿದ್ದರು ಬಿಜೆಪಿ 15 ಸಾವಿರ ಮತ ಪಡೆಯಿತು. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಡಬಲ್ ಓಟು ಪಡೆದುಕೊಂಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News