ಅಂತರ್ ಧರ್ಮಿಯ ವಿವಾಹಕ್ಕೆ ಅಡ್ಡಿಯಿಲ್ಲ: ಸಚಿವ ರಾಮದಾಸ್ ಅಠಾವಳೆ
ಬೆಂಗಳೂರು, ಡಿ. 20: 'ಲವ್‌ಜಿಹಾದ್' ಕಾನೂನಿನಲ್ಲಿ ಅಂತರ್ ಧರ್ಮಿಯ ವಿವಾಹಕ್ಕೆ ಯಾವುದೇ ರೀತಿಯ ಅಡ್ಡಿಯಿಲ್ಲ. ಬದಲಾಗಿ, ಉದ್ದೇಶ ಪೂರಕ ಹಾಗೂ ಒತ್ತಡ ಹೇರಿ ಮತಾಂತರ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಆರ್‌ಪಿಐ(ಎ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ರವಿವಾರ ನಗರದ ಕುಮಾರಕೃಪಾ ಅತಿಥಿ ಗೃಹ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾರೇ ಆದರೂ, ಇತರ ಧರ್ಮದ ವ್ಯಕ್ತಿಯನ್ನು ವಿವಾಹ ಆಗಬಹುದು. ಈ ಹಕ್ಕು ನಮ್ಮ ಸಂವಿಧಾನವೇ ನೀಡಿದೆ. ಆದರೆ, ವಿವಾಹ ನೆಪವನ್ನೆ ಇಟ್ಟುಕೊಂಡು ಉದ್ದೇಶ ಪೂರಕ ಹಾಗೂ ಒತ್ತಡ ಹೇರಿ ಧರ್ಮ ಬದಲಾವಣೆ ಸರಿಯಲ್ಲ. ಇದನ್ನು ತಡೆಯುವ ಉದ್ದೇಶದಿಂದಲೇ 'ಲವ್‌ಜಿಹಾದ್' ಕಾನೂನು ತರಲಾಗಿದೆ ಎಂದು ಹೇಳಿದರು.
ಅದೇ ರೀತಿ, ಬಿಜೆಪಿ ಪಕ್ಷ ಆಡಳಿತದಲ್ಲಿರುವ ವಿವಿಧ ರಾಜ್ಯಗಳಲ್ಲಿ ಗೋಹತ್ಯೆ ತಡೆಯಲು ಕಾನೂನು ರೂಪಿಸುತ್ತಿರುವುದು ಸ್ವಾಗತಾರ್ಹ. ಆದರೆ, ಗೋವುಗಳ ವಿಚಾರವಿಟ್ಟು ದಲಿತರ ಮೇಲೆ ನಡೆಯುವ ಗುಂಪು ಹಲ್ಲೆಗಳ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜತೆಗೆ, ಗೋಶಾಲೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು.
ಯಾವುದೇ ರಾಜ್ಯದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳ ಸರಕಾರವೇ ಇದ್ದರೂ, ದಲಿತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಏಕೆಂದರೆ, ಗ್ರಾಮಗಳಲ್ಲಿ ಜಾತಿಯ ಅಸಮಾನತೆ ಹೆಚ್ಚಾಗಿದ್ದು, ಮೇಲ್ಜಾತಿಯವರಿಂದಲೇ ಹೆಚ್ಚಾಗಿ ದಲಿತರು ಶೋಷಣೆ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಈ ಸರಕಾರ ಶೀಘ್ರವೇ ಪತನವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ, ಆರ್ಪಿಐ(ಎ) ಪಕ್ಷವೇ ಅಲ್ಲಿ ನೂತನ ಸರಕಾರ ರಚನೆ ಮಾಡಲಿದ್ದು, ಆಗ ಮತ್ತಷ್ಟು ಪ್ರಗತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
'ಕೃಷಿ ಕಾನೂನು ವಾಪಸ್ ಪಡೆಯುವ ಮಾತೇ ಇಲ್ಲ'
ಕೇಂದ್ರ ಸರಕಾರ ರೈತರ ಪ್ರಗತಿಗಾಗಿಯೇ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ, ರೈತರು ಹೊಸದಿಲ್ಲಿಯಲ್ಲಿ ನಿರಂತರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇವರ ಹೋರಾಟಕ್ಕೆ ಮಣಿದು ನಮ್ಮ ಸರಕಾರ ಕೃಷಿ ಕಾನೂನು ವಾಪಸ್ ಪಡೆಯುವ ಮಾತೇ ಇಲ್ಲ. ಒಂದು ವೇಳೆ ರೈತರು ಚರ್ಚೆಗೆ ಬಂದರೆ, ಪರಿಶೀಲನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಒಂದು ವೇಳೆ ಅವರನ್ನು ಬಿಜೆಪಿ ನಾಯಕರ ಬದಲಾಯಿಸಲು ಮುಂದಾದರೆ, ನಾನೇ ಬಿಎಸ್ಸೈ ಬೆಂಬಲಕ್ಕೆ ನಿಲ್ಲುವೆ.
-ರಾಮದಾಸ್ ಅಠಾವಳೆ, ಕೇಂದ್ರ ಸಚಿವ