ಅಭಿವೃದ್ಧಿ ಮರೀಚಿಕೆ: ಭಿಕ್ಷುಕನನ್ನು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿದ ಗ್ರಾಮಸ್ಥರು
ಮೈಸೂರು,ಡಿ.21: ಗ್ರಾ.ಪಂ. ಸದಸ್ಯರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮಸ್ಥರು ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯತ್ ಚುನಾವಣಾ ಅಖಾಡಕ್ಕೆ ಇಳಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಳಿಮಾವು ಗ್ರಾ.ಪಂನ ಬೊಕ್ಕಹಳ್ಳಿ ಗ್ರಾಮದಲ್ಲಿ ಅಲ್ಲಿನ ಯುವಕರ ತಂಡ ಮತ್ತು ಗ್ರಾಮಸ್ಥರು ಅದೇ ಗ್ರಾಮದ ಅಂಗವಿಕಲತೆಗೆ ಒಳಗಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಅಂಕನಾಯಕ ಎಂಬ ವ್ಯಕ್ತಿಯನ್ನು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿ, ಹಾಲಿ ಗ್ರಾ.ಪಂ. ಸದಸ್ಯರಿಗೆ ಸವಾಲು ಹಾಕಿದ್ದಾರೆ.
ಹುಳಿಮಾವು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಡುವ ಬೊಕ್ಕಹಳ್ಳಿ ಗ್ರಾಮದಲ್ಲಿನ ಒಂದು ಚರಂಡಿ ವಿಚಾರವಾಗಿ ಹಲವು ವರ್ಷಗಳಿಂದ ಸಮಸ್ಯೆ ಎದುರಾಗಿತ್ತು. ಇದು ಊರಿನ ಪ್ರಮುಖ ಚರಂಡಿಯಾಗಿದ್ದು, ಹಲವು ವರ್ಷಗಳಿಂದ ಚರಂಡಿ ನೀರು ಹೋಗದೆ ಕಟ್ಟಿಕೊಂಡಿತ್ತು. ಇದನ್ನು ಸರಿಪಡಿಸುವಂತೆ ಈ ಹಿಂದೆ ಆಯ್ಕೆಯಾಗಿದ್ದ ಗ್ರಾ.ಪಂ. ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಅಲ್ಲಿನ ಯುವಕರ ತಂಡವೊಂದು ತೀರ್ಮಾನ ಮಾಡಿ, ಭಿಕ್ಷೆ ಬೇಡಿ ಬದುಕುತ್ತಿರುವ ಅಂಕನಾಯಕನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ.
ತಂದೆ, ತಾಯಿ ಸೇರಿದಂತೆ ಹತ್ತಿರದ ಸಂಬಂಧಿಕರೂ ಇಲ್ಲದ ಅವಿವಾಹಿತ ಅಂಕನಾಯಕ ಅಂಗವಿಕಲರಾಗಿದ್ದು, ಇದ್ದ ಸಹೋದರನೂ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ. ಇವರು ಊರಿನ ಮನೆ ಮನೆಗಳಲ್ಲಿ ಭಿಕ್ಷೆ ಬೇಡಿ ಅಥವಾ ಅವರಿವರ ಮನೆಗಳಲ್ಲಿ ಕೆಲಸ ಮಾಡಿ ಒಂದು ಹೊತ್ತಿನ ಊಟ ಮಾಡುತ್ತಿದ್ದು, ಜನರು ನೀಡುವ ಹಣದಿಂದ ಬದುಕು ದೂಡುತ್ತಿದ್ದರಿಂದ ಗ್ರಾಮದ ಎಲ್ಲರಿಗೂ ಅವರು ಪರಿಚಯಸ್ಥ ವ್ಯಕ್ತಿ.
ಡಿ.27ರ ರವಿವಾರ ನಡೆಯಲಿರುವ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಭಿಕ್ಷುಕ ಅಂಕನಾಯಕರನ್ನು ಹುಳಿಮಾವು ಗ್ರಾಮಪಂಚಾಯತ್ ಬೊಕ್ಕಹಳ್ಳಿ ಗ್ರಾಮದ ಒಂದನೇ ಬ್ಲಾಕ್ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿಸಲಾಗಿದೆ. ಇಲ್ಲಿನ ವಿಷ್ಣುವರ್ಧನ್ ಯುವಕರ ಸಂಘದ ತಂಡ ಇವರಿಗೆ ಹೊಸ ಬಟ್ಟೆ ತೊಡಿಸಿ ಶಾಲು, ಹಾರ ಹಾಕಿ, ಕೂಲಿಂಗ್ ಗ್ಲಾಸ್ ಹಾಕಿಸಿ, ಊರಿನಲ್ಲಿ ಮೆರವಣಿಗೆ ಮಾಡಿ ಕಾರಿನಲ್ಲಿ ಕರೆದುಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಆಯ್ಕೆಯಾಗಿದ್ದ ಗ್ರಾ.ಪಂ.ಸದಸ್ಯರು ಅಭಿವೃದ್ಧಿ ಮಾಡದೆ ಇರುವುದರಿಂದ ಯುವಕರ ತಂಡ ನಮ್ಮೂರಿನ ಸೊತ್ತ ಅಂಗವಿಕಲ ಅಂಕನಾಯಕನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಈತನಿಗೆ ಯಾರೂ ಇಲ್ಲ ಮನೆ ಮನೆಗಳಲ್ಲಿ ಊಟ ಮಾಡಿ ಇಷ್ಟಬಂದ ಕಡೆ ಓಡಾಡಿಕೊಂಡು ಚಾವಡಿ ಸ್ಕೂಲ್ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಮಲಗುತ್ತಾನೆ
-ಬೊಕ್ಕಹಳ್ಳಿ ನಂಜುಂಡಸ್ವಾಮಿ, ರೈತ ಮುಖಂಡ