×
Ad

ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ನಿಧನ

Update: 2020-12-21 19:47 IST

ಬೆಳಗಾವಿ, ಡಿ.21: ಹಿರಿಯ ಪತ್ರಕರ್ತ, ಕನ್ನಡ ಪರ ಹೋರಾಟಗಾರ ರಾಘವೇಂದ್ರ ಜೋಶಿ (78) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.

ಬೆಳಗಾವಿ ನಗರದ ಭಾಗ್ಯನಗರ ಏಳನೇ ಕ್ರಾಸ್‍ನಲ್ಲಿರುವ ಮನೆಗೆ ಬೆಳಗ್ಗೆ ವಾಯುವಿಹಾರ ಮುಗಿಸಿ ಮರಳಿದ ಜೋಶಿ ಅವರು ಕುಸಿದು ಬಿದ್ದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಗಡಿ ನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಸಕ್ರಿಯವಾಗಿ ತೊಡಗಿದ್ದರು. ನಾಡು-ನುಡಿ, ಜಲ-ನೆಲದ ವಿಷಯದಲ್ಲಿ ಧಕ್ಕೆಯಾದಾಗ ಹೋರಾಟದಲ್ಲೂ ಭಾಗವಹಿಸುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ತಮ್ಮ ನಾಡೋಜ ಪ್ರತಿಷ್ಠಾನದ ಮೂಲಕ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಸಮ್ಮಾನ್ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸುತ್ತಿದ್ದರು.

ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರ ತಗಾದೆಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದ ಅವರು, ನಾಡೋಜ ಎಂಬ ದಿನಪತ್ರಿಕೆ ಆರಂಭಿಸಿದ್ದರು. ಇತ್ತೀಚೆಗೆ ನಿರ್ಭೀತ ಎಂಬ ವಾರಪತ್ರಿಕೆ ನಡೆಸುತ್ತಿದ್ದರು. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‍ನಿಂದ 2018-19ನೆ ಸಾಲಿನಲ್ಲಿ ನೀಡಿದ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News