×
Ad

ಟ್ರ್ಯಾಕ್ಟರ್ ಮಗುಚಿ ಬಿದ್ದು ಐವರು ಮಹಿಳೆಯರು ಸ್ಥಳದಲ್ಲೇ ಮೃತ್ಯು: 15 ಮಂದಿಗೆ ಗಾಯ

Update: 2020-12-21 20:00 IST

ಕನಕಪುರ, ಡಿ.21: ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿಗೆ ಗಾಯಗಳಾಗಿರುವ ಘಟನೆ ತಮಿಳುನಾಡು ಗಡಿಪ್ರದೇಶ ಕನಕಪುರ ತಾಲೂಕಿನ ದಬ್ಬಗುಳಿ ಸಮೀಪ ಸೋಮವಾರ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ ತಾಲೂಕಿನ ತಮಿಳುನಾಡು ಗಡಿ ಪ್ರದೇಶದಲ್ಲಿರುವ ದಬ್ಬಗುಳಿ ಬಸವೇಶ್ವರನ ಪೂಜೆಗೆಂದು ತೆರಳುತ್ತಿದ್ದಾಗ ಕಾವೇರಿ ನದಿ ತೀರದ ಅರಣ್ಯ ಪ್ರದೇಶದ ತಿರುವಿನಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ತಾಲೂಕಿನ ಕಸಬಾ ಹೋಬಳಿ ಕೆರಾಳುಸಂದ್ರ ಗ್ರಾಮದ ನಿವಾಸಿಗಳಾದ ಮಲ್ಲಯ್ಯನವರ ಪತ್ನಿ ಈರಮ್ಮ (85), ಹಳೆಬೀದಿಯ ಹೊಸಬಮ್ಮ (75), ವೆಂಕಟೇಗೌಡರ ಪತ್ನಿ ಪುಟ್ಟನಿಂಗಮ್ಮ (60), ಜಗದೀಶ್‌ರವರ ಪತ್ನಿ ಗೌರಮ್ಮ (60), ಮಂಜುನಾಥ್‌ರ ಪತ್ನಿ ಮಂಗಳ (25) ಮೃತಪಟ್ಟಿದ್ದಾರೆ.

ಕೆರಳಾಳುಸಂದ್ರ ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಮಂದಿ ತಮಿಳುನಾಡಿನ ಓಂಶಕ್ತಿ ದೇವಿಗೆ ತೆರಳಲು ಹರಕೆ ಹೊತ್ತಿದ್ದ ಹಿನ್ನೆಲೆಯಲ್ಲಿ ಕೆರಳಾಳುಸಂದ್ರ ಗ್ರಾಮದಿಂದ ಸುಮಾರು 25 ಮಂದಿ ಮಹಿಳೆಯರು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಅಪಘಾತ ಸಂಭವಿಸಿದ ಕೂಡಲೇ ಕೆಲವರನ್ನು ತಮಿಳುನಾಡಿನ ನೂತನ ತಾಲೂಕು ಅಂಚೆಟ್ಟಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೆ, ಇನ್ನುಳಿದ ಕೆಲವರನ್ನು ಹುಣಸನಹಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕನಕಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಡೆಂಕಣಿಕೋಟೆ ಜಿಲ್ಲಾ ಕೇಂದ್ರದ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಿದ್ದಾರೆ.

ಅಂಚೆಟ್ಟಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News