×
Ad

2023ಕ್ಕೆ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಗುರಿ: ಕುಮಾರಸ್ವಾಮಿ

Update: 2020-12-21 20:56 IST

ಬೆಂಗಳೂರು, ಡಿ. 21: ‘ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷದ ಕತ್ತು ಹಿಸುಕಲು ಕಾಂಗ್ರೆಸ್ ಮುಂದಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೆಲ ನಿರ್ಧಾರಗಳನ್ನು ಮಾಡಿದ್ದೇವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹಾಗೂ ಜೆಡಿಎಸ್ ಪಕ್ಷವನ್ನು ತೊರೆದ ಕೆಲವರು ಇದೀಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ, ನಾವು ಜೀವಂತ ಇರುವವರೆಗೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬೇರೆ ಪಕ್ಷದ ಜೊತೆಗೆ ಜೆಡಿಎಸ್ ವಿಲೀನವೂ ಅಸಾಧ್ಯದ ಮಾತು' ಎಂದು ತಿಳಿಸಿದರು.

2023ಕ್ಕೆ ನಿಜವಾದ ರಾಜಕಾರಣ: ನನ್ನ ನಿಜವಾದ ರಾಜಕಾರಣ ಆರಂಭವಾಗುವುದು 2023ಕ್ಕೆ. ಇದುವರೆಗೆ ನಾನು ರಾಜಕಾರಣ ಮಾಡಿದ್ದು, ತಾತ್ಕಾಲಿಕವಾದ್ದದ್ದು, 2023ಕ್ಕೆ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಕುಮಾರಸ್ವಾಮಿ ಪ್ರಕಟಿಸಿದರು.

ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಂದಲೇ ಜೆಡಿಎಸ್‍ಗೆ ಹಿನ್ನಡೆಯಾಗಿದೆ. ಉಪಚುನಾವಣೆ ಯಾವುದೇ ಪಕ್ಷಕ್ಕೆ ಮಾನದಂಡ ಅಲ್ಲ. ಪಕ್ಷದಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ನೀಡುತ್ತಿದ್ದು, ಅದಕ್ಕೆ ನಮ್ಮ ಪಕ್ಷದಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಊಹಾಪೋಹಗಳನ್ನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷವನ್ನು ಯಾವುದೇ ಪಕ್ಷದ ಜೊತೆ ವಿಲೀನ ಮಾಡುವುದಿಲ್ಲ. ನಾವು ಬದುಕಿರುವವರೆಗೂ ಜೆಡಿಎಸ್ ಬೇರೊಂದು ಪಕ್ಷದ ಜೊತೆ ವಿಲೀನವಾಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 60 ವರ್ಷದ ರಾಜಕಾರಣದಲ್ಲಿ 4-5 ವರ್ಷ ಮಾತ್ರ ಅವರು ಅಧಿಕಾರದಲ್ಲಿದ್ದರು. ಡಿಎಂಕೆ, ನಿತೀಶ್ ಕುಮಾರ್ ಮೊದಲಾದವರು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರ ಜೊತೆಗೂ ಹೋಗಿದ್ದಾರೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ. ಪ್ರತಿಯೊಂದು ಪಕ್ಷವು ಅಧಿಕಾರ ಹೇಗೆ ಹಿಡಿಯಬೇಕು ಎಂಬುದನ್ನಷ್ಟೇ ನೋಡುತ್ತಿರುತ್ತವೆ ಎಂದು ಕುಮಾರಸ್ವಾಮಿ ಹೇಳಿದರು.

ಎಚ್ಚರಿಕೆಯಿಂದ ಮಾತನಾಡಲಿ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು. ನಾನು ಅವರ ಋಣದಲ್ಲಿಲ್ಲ. ಬದಲಿಗೆ ನನ್ನ ಋಣದಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗುವಾಗ ನನ್ನ ಕೊಡುಗೆ ಇದೆ. ನನ್ನ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಎಚ್ಚರಿಕೆಯಿಂದಿರಬೇಕು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

2004ರಲ್ಲಿ ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತರಲು ನನ್ನ ದುಡಿಮೆಯೂ ಇದೆ. ಸಿದ್ದರಾಮಯ್ಯ ಈ ಸ್ಥಾನಕ್ಕೆ ಬರಲು, 2004ರಲ್ಲಿ ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಿಮ್ಮನ್ನು ಡಿಸಿಎಂ ಮಾಡಿದ್ದೇನೆ. ಸಿದ್ದರಾಮಯ್ಯ ಅವರೇ ನನ್ನ ಋಣದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಲಘುವಾಗಿ ಮಾತನಾಡುವುದು ಬೇಡ: ಖಾಸಗಿ ಹೊಟೇಲ್‍ನಲ್ಲಿದ್ದು ಆಡಳಿತ ನಡೆಸಿರುವ ಸಂಬಂಧ ಸಿದ್ದರಾಮಯ್ಯ ಲಘುವಾಗಿ ಮಾತನಾಡುವುದು ಬೇಡ. ನಾನು ಬಿಜೆಪಿ ‘ಬಿ' ಟೀಮ್ ಆಗಿದ್ದರೆ ಕಾಂಗ್ರೆಸ್ ಪಕ್ಷದ ಜೊತೆ ಸರಕಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್‍ನವರೆ ಸರಕಾರ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದರು. ಆ ವೇಳೆ ದೇವೇಗೌಡರು, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಇದ್ದರು ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News