×
Ad

ಟಿಎಪಿಸಿಎಂಎಸ್‍ನ ವಾರ್ಷಿಕ ಮಹಾಸಭೆಯಲ್ಲಿ ಹೈಡ್ರಾಮ: ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಅಧ್ಯಕ್ಷ

Update: 2020-12-21 21:12 IST

ಮೂಡಿಗೆರೆ, ಡಿ.21: ಇಲ್ಲಿನ ಟಿಎಪಿಸಿಎಂಎಸ್‍ನ ವಾರ್ಷಿಕ ಮಹಾಸಭೆ ಸೋಮವಾರ ಪಟ್ಟಣದ ರೈತ ಭವನದಲ್ಲಿ ನಡೆದಿದ್ದು, ಸಭೆಯಲ್ಲಿ ಹಿಂದಿನ ಆಡಳಿತ ಅವಧಿಯಲ್ಲಿ ಅವ್ಯವಹಾರ ನಡೆದಿದೆ, ಈ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆ ನಡೆಸಲು ತೀರ್ಮಾನಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಬಿ.ಎನ್.ಜಯಂತ್ ಸಭೆಗೆ ತಿಳಿಸಿದಾಗ, ಸಭೆಯಲ್ಲಿ ಗೊಂದಲ ಏರ್ಪಟ್ಟು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ ಎಂಬವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಭವನದ ಕಟ್ಟಡ ಏರಿದ್ದರಿಂದ ಸ್ಥಳದಲ್ಲಿದ್ದವರು ಭಾರೀ ಆತಂಕಕ್ಕೆ ಒಳಗಾಗಿದ್ದ ಘಟನೆ ನಡೆಯಿತು.

ಈ ಹಿಂದೆ ರೈತ ಭವನ ನಿರ್ಮಾಣದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ನಡೆಸಲಾಗಿದೆ ಎಂಬ ಆರೋಪಗಳಿದ್ದು, ಹಿಂದಿನ ಆಡಳಿತ ಮಂಡಳಿಯಲ್ಲಿ ಇದರ ಬಗ್ಗೆ ಒಕ್ಕೊರಲಿನಿಂದ ಖಂಡನೆಯಾಗಿದೆ. ಮುಖಭಂಗದಿಂದ ನಿರ್ದೇಶಕರಾಗಿದ್ದ ಲಕ್ಷ್ಮಣಗೌಡ ರಾಜಿನಾಮೆ ಸಲ್ಲಿಸಿದ್ದರು. ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಅವ್ಯವಹಾರದ ತನಿಖೆಗೆ ಸಹಕಾರ ಕಾಯ್ದೆ 64ಬಿ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಲಾಗಿದ್ದು, ಇದನ್ನು ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಭೆ ಮಧ್ಯೆ ರೈತ ಭವನದ ಮೇಲೇರಿ ಸುಮಾರು 2 ಗಂಟೆಗಳ ಕಾಲ ಕಟ್ಟಡ ತುದಿಯಲ್ಲಿ ನಿಂತು ಅತ್ತಿತ್ತ ತಿರುಗುತ್ತ ಕೆಳಗಿರುವವರಿಗೆ ಸಾಯುವುದಾಗಿ ಬೆದರಿಕೆ ಹಾಕಿದರು.

ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಆಗಮಿಸಿತ್ತಾದರೂ ಆತ್ಮಹತ್ಯೆ ಸಮಯದಲ್ಲಿ ರಕ್ಷಿಸುವಂತಹ ಯಾವುದೇ ಸಾಧನಗಳು ಇವರಲ್ಲಿರಲಿಲ್ಲ, ಮನವೊಲಿಸುವ ಪ್ರಯತ್ನ ನಡೆಸಲಾಯಿತು. ರಕ್ಷಿಸಲು ಸಮೀಪ ಹೋಗುವವರಿಗೆ ನಿಮ್ಮನ್ನೂ ಎಳೆದುಕೊಂಡು ಕೆಳಕ್ಕೆ ಹಾರುತ್ತೇನೆ ಎಂದು ಬೆದರಿಕೆ ಕೂಡಾ ಹಾಕುತ್ತಿದ್ದರು. ಇದರಿಂದ ನಾಟಕೀಯ ಪ್ರಸಂಗ ಮುಂದುವರಿಯಿತು. ಕೊನೆಗೆ ರೈತ ಭವನದ ಮೇಲ್ವಿಚಾರಕ ಮಹೇಶ್ ಹಿಂಭಾಗದಿಂದ ಕಾಣಿಸದಂತೆ ತೆರಳಿ ಅವರ ರಕ್ಷಣೆ ಮಾಡಿದರು. ನಂತರ ಸರ್ವ ಸದಸ್ಯರ ಸಭೆಯನ್ನು ಆಡಳಿತ ಮಂಡಳಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಅಧ್ಯಕ್ಷ ಬಿ.ಎನ್.ಜಯಂತ್‍ ಮಾತನಾಡಿ, 2019ರಲ್ಲಿ ನಡೆದಿದ್ದ ಮಹಾಸಭೆಯಲ್ಲಿ ಟಿಎಪಿಸಿಎಂಎಸ್‍ನ ಹಿಂದಿನ ಆಡಳಿತ ಮಂಡಳಿಯವರು ನಡೆಸಿದ ಅವ್ಯವಹಾರದ ತನಿಖೆ ನಡೆಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಇಂದಿನ ಸಭೆಯಲ್ಲಿ ಓದಿ ಹೇಳುವಾಗ ಮಾಜಿ ಅಧ್ಯಕ್ಷರೊಬ್ಬರು ಏಕಾಏಕಿ ಸಭೆಯಿಂದ ಹೊರ ಹೋಗಿ ಆತ್ಮಹತ್ಯೆಯ ನಾಟಕವಾಡಿ, ದಾರಿ ತಪ್ಪಿಸಲು ಮುಂದಾಗಿದ್ದಾರೆ. ಮಹಾಸಭೆಯ ತೀರ್ಮಾನವನ್ನು ಇನ್ನೊಂದು ಮಹಾಸಭೆಯಲ್ಲಿಯೇ ಮತ್ತೆ ನಿರ್ಣಯ ಕೈಗೊಂಡು ತೀರ್ಮಾನ ಮಾಡಬೇಕಿದೆ. ಇದು ಸಹಕಾರ ಇಲಾಖೆ ನಿಬಂಧನೆಯಾಗಿದೆ. ಅವ್ಯವಹಾರ ನಡೆಸದಿದ್ದರೆ ತನಿಖೆಗೆ ಒಪ್ಪಿಗೆ ಸೂಚಿಸಬೇಕಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವಿರಲಿಲ್ಲ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಂ.ಎಲ್. ಕಲ್ಲೇಶ್ ನಿರ್ದೇಶಕರಾದ ರಂಜನ್ ಅಜಿತ್ ಕುಮಾರ್, ಎಂ.ವಿ.ಜಗದೀಶ್, ಓ.ಜಿ.ರವಿ, ಕೆ.ಪಿ.ಭಾರತಿ, ವಿ.ಕೆ.ಶಿವೇಗೌಡ, ಉತ್ತಮ್‍ಕುಮಾರ್, ಎಂ.ಎಲ್.ಅಭಿಜಿತ್, ಎಚ್.ಜಿ.ಸಂದರ್ಶ, ರೇಣುಕಾ ಉಪೇಂದ್ರ, ಡಿ.ಜಗನ್ನಾಥ್, ಸುರೇಶ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಗೌಡ, ಕೆ.ವೆಂಕಟೇಶ್ ಮತ್ತಿತರರಿದ್ದರು.

ಸಂಸ್ಥೆಯ ಮಾಜಿ ಅದ್ಯಕ್ಷರು ಹಿರಿಯ ಜೀವ, ಕಟ್ಟಡದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ, ಇದನ್ನು ತಡೆಯಬೇಕೆಂದು ಪ್ರಾಣದ ಹಂಗು ತೊರೆದು ಕಾಪಾಡಿದ್ದೇನೆ.
- ಮಹೇಶ, ರೈತ ಭವನ ಮೇಲ್ವಿಚಾರಕ.

ಹಾಸ್ಯಾಸ್ಪದ ಘಟನೆ
ರಕ್ಷಣೆ ಮಾಡಿದ ಸಂದರ್ಭದಲ್ಲಿ ಲಕ್ಷ್ಮಣ ಗೌಡ ಅವರನ್ನು ಕೆಳಕ್ಕೆ ಇಳಿಸಲು ಏಣಿಯನ್ನು ಬಳಸಿದ್ದು, ಕೆಳಕ್ಕೆ ಇಳಿಯುವಾಗ ಏಣಿ ಗಟ್ಟಿ ಇದೆಯಲ್ಲವೇ ಎಂದು ಏಣಿಯನ್ನು ತುಳಿದು ನೋಡಿದ್ದು ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News