ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲು ನಿರ್ಧಾರ
ಬೆಂಗಳೂರು, ಡಿ.21: ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ರೈತ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಜಂಟಿ ಆಶ್ರಯದಲ್ಲಿ ರಾಜ್ಯಾದ್ಯಂತ ಜನಜಾಗೃತಿ ಹಾಗೂ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಸೋಮವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಷಾ ಕಾಂಪೌಂಡ್‍ನಲ್ಲಿ ಆಯೋಜಿಸಿದ್ದ ಕರ್ನಾಟಕ ಗೋ ಹತ್ಯೆ ನಿಷೇದ (ಕರಡು) ಕಾಯ್ದೆ-2020 ರನ್ನು ವಿರೋಧಿಸಿ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ 30ಕ್ಕೂ ಅಧಿಕ ಸಂಘಟನೆಗಳ ಮುಖಂಡರು ಒಮ್ಮತದಿಂದ ನಿರ್ಣಯ ಕೈಗೊಂಡಿದ್ದಾರೆ.
ರಾಜ್ಯಾದ್ಯಂತ ಪ್ರತಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ, ಗ್ರಾಮ ಮಟ್ಟದಲ್ಲಿ ಜನ ಜಾಗೃತಿ ಮೂಡಿಸಲು ಸಭೆಯು ನಿರ್ಣಯ ಕೈಗೊಂಡಿದ್ದು, ಅದಕ್ಕಾಗಿ ಕರ್ನಾಟಕ ರಾಜ್ಯ ಗೋಹತ್ಯೆ ನಿಷೇಧ ಕಾಯ್ದೆ-2020 ವಿರೋಧಿ ಜನಜಾಗೃತಿ ಸಮಿತಿ ಎಂಬ ಸಮಿತಿಯೊಂದನ್ನು ರಚಿಸಲಾಗಿದೆ. ಇದರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನ ಮಾಡಲಾಗಿದೆ.
ಡಿಸೆಂಬರ್ ತಿಂಗಳ ಪೂರ್ತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಅನಂತರ ಜ.10 ರಂದು ರಾಜಧಾನಿಯಲ್ಲಿ 100 ಸಂಘಟನೆಗಳ ಬೆಂಬಲದೊಂದಿಗೆ ಮತ್ತೊಂದು ಸುತ್ತಿನ ಚಿಂತನಾ ಸಭೆ ನಡೆಸಬೇಕು. ಅನಂತರ ರಾಜ್ಯಾದ್ಯಂತ ಜನ ಜಾಗೃತಿ ಆಂದೋಲನ ಹಮ್ಮಿಕೊಂಡು, 10 ಲಕ್ಷ ಜನರಿಂದ ಪತ್ರ ಚಳವಳಿ ನಡೆಸಬೇಕು ಹಾಗೂ ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಸರಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಬೇಕು ಎಂದು ಸಭೆಯು ನಿರ್ಣಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಘಟಕ ಖಾಸಿಂ ಸಾಬ್, ಸರಕಾರವು ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಉತ್ತರ ಭಾರತದಲ್ಲಿ ಶೇ.68 ರಷ್ಟು ಜನರು ಹಾಗೂ ದಕ್ಷಿಣ ಭಾರತದಲ್ಲಿ ಶೇ.91 ರಷ್ಟು ಜನರು ಬೀಫ್ ಸೇವಿಸುತ್ತಾರೆ. ಆದರೆ, ಶೇ.16 ರಷ್ಟೇ ಮುಸ್ಲಿಮ್ ಸಮುದಾಯವಿದ್ದು, ಅದರಲ್ಲಿಯೂ ಶೇ.6-7 ರಷ್ಟು ಜನರು ಬೀಫ್ ತಿನ್ನುವುದಿಲ್ಲ. ಆದರೆ, ಸರಕಾರವು ಸಾಮಾನ್ಯ ಜನರ ಆಹಾರದ ಹಕ್ಕಿನ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ದೂರಿದರು.
ಜನರನ್ನು ಬಿಜೆಪಿ ವಿಭಜಿಸಲು ಮುಂದಾಗಿದ್ದರೆ, ನಾವು ವಿಷಯಾಧಾರಿತವಾಗಿ ಒಂದುಗೂಡಿಸುವ ಕೆಲಸ ಮಾಡಬೇಕು. ರೈತ, ಜನ ವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದ ಅವರು, ಬಿಜೆಪಿ ತನಗೆ ಅಧಿಕಾರವಿರುವ ಕಡೆಗಳಲ್ಲಿ ಅಷ್ಟೇ ಮತ ಬ್ಯಾಂಕ್‍ಗಾಗಿ ಇಂತಹ ಕಾಯ್ದೆಗಳನ್ನು ತರಲು ಹೊರಟಿದೆ. ಇಂತಹ ವಾಸ್ತವಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಮುಸ್ಲಿಮ್ ಜಾಗೃತಿ ವೇದಿಕೆಯ ಶಫೀವುಲ್ಲಾ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರಕಾರವು ಜನರ ಆರೋಗ್ಯದ ಕಡೆಗೆ ಗಮನ ನೀಡುವುದನ್ನು ಬಿಟ್ಟು, ಇಂತಹ ಕಾಯ್ದೆಗಳನ್ನು ತರಲು ಮುಂದಾಗಿದೆ. ಅಂತಹ ಕಾಯ್ದೆಗಳ ಮೂಲಕ ದಲಿತರು, ಅಲ್ಪಸಂಖ್ಯಾತರನ್ನು ಮತ್ತೊಂದು ರೀತಿಯ ಗುಲಾಮಗಿರಿಗೆ ತಳ್ಳಲು ಹೊರಟಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾಗೃತ ಸಮಿತಿಯ ತನ್ಜೀರ್, ಅಂಬೇಡ್ಕರ್ ಸ್ವಾಭಿಮಾನ ಸೇನೆಯ ಅಧ್ಯಕ್ಷ ಕೋದಂಡರಾಮ, ಟಿಪ್ಪು ಸಂಯುಕ್ತ ರಂಗದ ಡಾ.ದಾವೂದ್ ಇಕ್ಬಾಲ್, ರೈತ ಸಂಘದ ಮುಖಂಡ ಜಗದೀಶ್(ದಾವಣಗೆರೆ), ಸ್ವರಾಜ್ ಇಂಡಿಯಾದ ಕಲೀಲ್, ಆಲ್ ಇಂಡಿಯಾ ಖುರೇಶಿ ಜಮಾ ಅತ್‍ನ ಖಾಸಿಮ್ ಖುರೇಷಿ, ಪಿಂಜಾರ ಹೋರಾಟ ಸಮಿತಿಯ ಗೌಸ್‍ಪೀರ್, ದಲಿತ ಸೇನೆಯ ಖಾಲಿದ್ ಖಾನ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಇದ್ದರು.