×
Ad

ಸರಕಾರದಿಂದ ಸಿಗದ ಪರಿಹಾರ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾದ ಶ್ರೀಗಂಧ ಬೆಳೆಗಾರ

Update: 2020-12-21 21:26 IST

ಚಿಕ್ಕಮಗಳೂರು, ಡಿ.21: ಶ್ರೀಗಂಧ ಬೆಳೆದಿದ್ದ ರೈತರ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪರಿಣಾಮ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದ್ದರೂ ಇನ್ನೂ ಪರಿಹಾರ ಸಿಗದಿದ್ದರಿಂದ ಬೇಸತ್ತ ಶ್ರೀಗಂಧ ಬೆಳೆದ ರೈತರೊಬ್ಬರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಘಟನೆ ಸೋಮವಾರ ಬೆಳಗ್ಗೆ ಜಿಲ್ಲೆಯ ತರೀಕರೆಯಲ್ಲಿ ನಡೆದಿದ್ದು, ಸಂಜೆಯಾಗುತ್ತಿದ್ದಂತೆ ಪತ್ತೆಯಾದ ಬೆಳೆಗಾರ ಮನಸಿಗೆ ಬೇಜಾರಾಗಿದ್ದರಿಂದ ಹೀಗೆ ಮಾಡಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ನಡೆದಿದೆ.

ತರೀಕೆರೆ ತಾಲೂಕಿನ ವಿಶುಕುಮಾರ್ ಹೀಗೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶ್ರೀಗಂಧ ಬೆಳೆಗಾರನಾಗಿದ್ದು, ಈ ಬೆಳೆಗಾರನ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಸರಕಾರ ಮುಂದಾಗಿದ್ದು, ವಿಶುಕುಮಾರ್ ಸೇರಿದಂತೆ ಶ್ರೀಗಂಧ ಬೆಳೆದ ಅನೇಕ ರೈತರ ಜಮೀನು ಹೆದ್ದಾರಿಗಾಗಿ ಬಿಡಲಾಗಿತ್ತು. ಆದರೆ ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರಗಳಿಗೆ ಸರಕಾರ ಸಕಾಲದಲ್ಲಿ ಸಮರ್ಪಕ ಪರಿಹಾರ ನೀಡಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಶುಕುಮಾರ್ ಪತ್ರ ಬರೆದಿಟ್ಟು ಸೋಮವಾರ ಬೆಳಗ್ಗೆ ನಾಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಜೆ ವೇಳೆ ಹೊಸ ತಿರುವು ಸಿಕ್ಕಿದ್ದು ಮನಸ್ಸಿಗೆ ಬೇಸತ್ತು ಹೀಗೆ ಮಾಡಿದೆ ಎಂದು ವಿಶುಕುಮಾರ್ ಸೋಮವಾರ ಸಂಜೆ ಮತ್ತೊಂದು ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.

ತರೀಕರೆ ಸಮೀಪದ ಹಳಿಯೂರು ಗ್ರಾಮದ 22 ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಅದರಲ್ಲಿ ವಿಶುಕುಮಾರ್ ಕೂಡ ಒಬ್ಬರಾಗಿದ್ದು, ತರೀಕೆರೆ ಪಟ್ಟಣ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಿಸಲು ಸರಕಾರ ಮುಂದಾಗಿರುವುದರಿಂದ ಕಳೆದ 8ರಿಂದ 10 ವರ್ಷಗಳಿಂದ ಬೆಳೆದಿದ್ದ ಶ್ರೀಗಂಧ ಮರಗಳು ನಾಶವಾಗಲಿವೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು.

ಶ್ರೀಗಂಧ ಬೆಳೆದ ರೈತರಿಗೆ ಸಮರ್ಪಕ ಪರಿಹಾರ ನೀಡುವಂತೆ ಹೈಕೋರ್ಟ್ ಎನ್‍ಎಚ್‍ಎಐಗೆ ಆದೇಶ ನೀಡಿದೆ. ಆದರೆ ಇನ್ನೂ ಪರಿಹಾರ ನೀಡಿಲ್ಲ. ಈ ಸಂಬಂಧ ರೈತರು ಪ್ರತಿಭಟನೆಯನ್ನು ನಡೆಸಿದ್ದರು. ಒಂದು ಮರಕ್ಕೆ 30 ವರ್ಷ ಜೀವಿತಾವಧಿಯ ಲೆಕ್ಕಚಾರದಲ್ಲಿ 2 ಲಕ್ಷ 44 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಎನ್‍ಎಚ್‍ಎಐ ರೈತರಿಗೆ ಸಮರ್ಪಕ ಪರಿಹಾರದ ಹಣವನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂದು ವಿಶುಕುಮಾರ್ ಸೇರಿದಂತೆ ಶ್ರೀಗಂಧ ಬೆಳೆದ ರೈತರು ಆರೋಪಿಸಿದ್ದರು.

ಎನ್‍ಎಚ್‍ಎಐ ತುಮಕೂರು ಕಚೇರಿ ಎದುರು ಆತ್ಮಹತ್ಯೆಗೆ ಶರಣಾಗುವುದಾಗಿ ವಿಶುಕುಮಾರ್ ಸೋಮವಾರ ವಿಡಿಯೋ ಮತ್ತು ಡೆತ್‍ನೋಟ್‍ನಲ್ಲಿ ತಿಳಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಅಧಿಕಾರಿಗಳು ವಿಶುಕುಮಾರ್ ಮನವೊಲಿಸಿದ್ದು, ಅಧಿಕಾರಿಗಳು ತೋಟಕ್ಕೆ ಹೋದಾಗ ಬೇಜಾರು ಆಗಿ ಈ ರೀತಿ ಮಾಡಿದೆ. ಮುಂದೇ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆಂದು ಮತ್ತೋಂದು ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News