ಕೋರ್ಟ್ ಗೆ ಸುಳ್ಳು ಹೇಳಿಕೆ ನೀಡಿದ್ದ ಆರೋಪ: ಇನ್‍ಸ್ಪೆಕ್ಟರ್ ವಿರುದ್ಧ ಕ್ರಿಮಿನಲ್ ಅರ್ಜಿ ದಾಖಲು
ಬೆಂಗಳೂರು, ಡಿ.21: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾದ ಆರೋಪದಲ್ಲಿ ಎಫ್‍ಐಆರ್ ದಾಖಲಿಸದೆ ಶೇಷಾದ್ರಿಪುರಂನ ಇನ್‍ಸ್ಪೆಕ್ಟರ್ ಕೃಷ್ಣಮೂರ್ತಿ 32ನೆ ಎಸಿಎಂಎಂ ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿದೆ.
ಇನ್‍ಸ್ಪೆಕ್ಟರ್ ಅವರು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂಬುದಕ್ಕೆ ದೃಢೀಕೃತ ಪುರಾವೆಗಳನ್ನು ಒದಗಿಸಿರುವ ಪರಿಷತ್, ಎಫ್‍ಐಆರ್ ದಾಖಲಿಸದೆ ಕುಂಟು ನೆಪ ಹೇಳಿರುವ ಕೃಷ್ಣಮೂರ್ತಿ ವಿರುದ್ಧ ಶಿಕ್ಷೆ ವಿಧಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವಿಜಯೇಂದ್ರ ಮತ್ತಿತರರ ವಿರುದ್ಧ ಐಪಿಸಿ 384 ಅಡಿಯಲ್ಲಿ ಶೇಷಾದ್ರಿಪುರಂ ಠಾಣೆಗೆ ಜನಾಧಿಕಾರಿ ಸಂಘರ್ಷ ಪರಿಷತ್ ದೂರು ನೀಡಿತ್ತು. ಈ ದೂರಿನ ಅನ್ವಯ ಆರೋಪಿತರ ವಿರುದ್ಧ ಎಫ್‍ಐಆರ್ ದಾಖಲಾಗಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಪರಿಷತ್ 32ನೆ ಎಸಿಎಂಎಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ವೇಳೆಯಲ್ಲಿ ಇನ್‍ಸ್ಪೆಕ್ಟರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ ಎಂದು ನ್ಯಾಯಾಲಯದ ದಿಕ್ಕು ತಪ್ಪಿಸಿದ್ದರು ಎಂದು ಪರಿಷತ್ ದಾಖಲೆ ಸಮೇತ ವಾದವನ್ನು ಮುಂದೊಡ್ಡಿದೆ.
ಇನ್‍ಸ್ಪೆಕ್ಟರ್ ನೀಡಿದ್ದ ಹೇಳಿಕೆ ಆಧರಿಸಿ ನ್ಯಾಯಾಲಯವು ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಈಗ ಪರಿಷತ್, ಇನ್‍ಸ್ಪೆಕ್ಟರ್ ಅವರು ಕೋರ್ಟ್‍ನ್ನು ಹೇಗೆ ದಿಕ್ಕು ತಪ್ಪಿಸಿದ್ದಾರೆ ಎಂದು ಪುರಾವೆಗಳ ಸಮೇತ ಸಲ್ಲಿಸಿರುವ ಹೊಸ ಅರ್ಜಿ ಪ್ರಕರಣವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ಸಲ್ಲಿಸಿದ್ದ ದೂರಿಗೂ ಚಂದ್ರಕಾಂತ್ ರಾಮಲಿಂಗಂ ಅವರು ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದರ ಆಧಾರದ ಹಿನ್ನೆಲೆಯಲ್ಲಿ ಇನ್‍ಸ್ಪೆಕ್ಟರ್ ಅವರು ಕೋರ್ಟ್‍ಗೆ ನೀಡಿರುವ ಹೇಳಿಕೆಯೇ ಸುಳ್ಳು ಎಂದು ಸಿಆರ್‍ಪಿಸಿ ಕಲಂ 340 ಮತ್ತು 195 ಹಾಗೂ ಐಪಿಸಿ 193, 199, 201ರ ಅಡಿಯಲ್ಲಿ ಅದೇ ಕೋರ್ಟ್‍ನಲ್ಲಿ ಕ್ರಿಮಿನಲ್ ಅರ್ಜಿ ದಾಖಲಿಸಿದೆ.