ಲಕ್ಷಾಂತರ ರೂ. ಸುಲಿಗೆ ಮಾಡಿ ಯುವಕನನ್ನು 3 ತಿಂಗಳು ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ: ಆರೋಪ
ಬೆಂಗಳೂರು, ಡಿ.21: ಯುವಕನೋರ್ವನನ್ನು ಅಕ್ರಮ ಬಂಧನದಲ್ಲಿಟ್ಟು, ಹೊಡೆದು, ಚಿತ್ರಹಿಂಸೆ ನೀಡಿ, ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಂಗಳೂರು ಮೂಲದ ಸ್ವರೂಪ್ ಶೆಟ್ಟಿ ಎಂಬಾತ ಈ ಕೃತ್ಯವೆಸಗಿದ್ದು, ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ ಎಂದು ಆಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಆರೋಪಿಯು ಹಾವೇರಿ ಮೂಲದ ಅರ್ಶಾದ್ ಎಂಬವರನ್ನು ಮೊದಲು ಬೆಂಗಳೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಇದೇ ಹೊಟೇಲ್‍ನಲ್ಲಿ ಅರ್ಶಾದ್ ಕೆಲಸ ಮಾಡುತ್ತಿದ್ದು, ಗ್ರಾಹಕನಾಗಿ ಪ್ರತಿನಿತ್ಯ ಸ್ವರೂಪ್ ಬರುತ್ತಿದ್ದ ಎನ್ನಲಾಗಿದೆ. ತದನಂತರ ಈ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಅರ್ಶಾದ್ ತನಗೆ ಹಣಕಾಸಿನ ತೊಂದರೆ ಇದೆ ಎಂದು ಸ್ವರೂಪ್ ಬಳಿ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ನಂತರ ಸ್ವರೂಪ್, ಸಹಾಯ ಮಾಡುತ್ತೇನೆ. ಆದರೆ, ಈ ಬಗ್ಗೆ ಯಾರಿಗೂ ಹೇಳಬಾರದು ಎಂದಿದ್ದಾನೆ. ಬಳಿಕ ಸ್ವರೂಪ್ ಕೇರಳ ಮೂಲದ ಒಬ್ಬರು ಸ್ವಾಮೀಜಿ ಬಗ್ಗೆ ಅರ್ಶಾದ್ ಜೊತೆ ಮಾತನಾಡಿ, ಅವರು ನನಗೆ 24 ಲಕ್ಷ ರೂ. ಹಣವನ್ನು ಖಾತೆಗೆ ಹಾಕಿದ್ದಾರೆ ಎಂದಿದ್ದಾನೆ. ಇದಕ್ಕೆ ತೆರಿಗೆ ಕಟ್ಟಬೇಕು. ಆ ಹಣವನ್ನು ನೀನು ಕೊಡು ಎಂದು ಅರ್ಶಾದ್‍ಗೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ಅರ್ಶಾದ್ ತನ್ನ ಮಾವನನ್ನು ಸಂಪರ್ಕ ಮಾಡಿ ಐದು ಲಕ್ಷ ರೂ. ಹಣವನ್ನು ಸ್ವರೂಪ್‍ಗೆ ಕೊಟ್ಟಿದ್ದಾನೆ. ತೆರಿಗೆ ಕಟ್ಟಿದ ಮೇಲೂ ಅರ್ಶಾದ್‍ಗೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಮತ್ತೆ ಹಣವನ್ನು ಆತನೇ ಕೊಡುವುದಾಗಿ ಹೇಳಿ, ಕಾಡುಗೋಡಿ ಬಳಿಯ ತನ್ನ ಅಪಾರ್ಟ್‍ಮೆಂಟ್‍ಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ತದನಂತರ, ಮೂರು ತಿಂಗಳು ಅಕ್ರಮವಾಗಿ ಬಂಧನದಲ್ಲಿಟ್ಟು, ಪೊಲೀಸರ ರೀತಿ ಅರ್ಶಾದ್ ತಾಯಿಗೆ ಕರೆ ಮಾಡಿ ಚೆಕ್ ಬೌನ್ಸ್ ಕೇಸ್‍ನಲ್ಲಿ ಬಂಧನ ಮಾಡಿಸುವುದಾಗಿ ಬೆದರಿಕೆ ಹಾಕಿ ಬಳಿಕವೂ ಸುಮಾರು 48 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ಮೋಸ ಹೋಗುತ್ತಿರುವ ವಿಚಾರ ತಿಳಿದ ಯುವಕನ ಕುಟುಂಬಸ್ಥರು ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.