ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿ ಧರಣಿ

Update: 2020-12-22 14:07 GMT

ಮೈಸೂರು,ಡಿ.22: ತುಮಕೂರು ಸಿದ್ದಗಂಗಾ ಮಠದ ದಿವಂಗತ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು, ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಮಾತನಾಡಿದ ವಾಟಾಳ್ ನಾಗರಾಜ್, ಮರಾಠ ಪ್ರಾಧಿಕಾರದಿಂದ ಕರ್ನಾಟಕಕ್ಕೆ ದೊಡ್ಡ ಕಳಂಕ. ಇದರಿಂದ ಬೆಳಗಾವಿ, ಖಾನಾಪುರ ನಿಪ್ಪಾಣಿ ಇತರೆ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಶಿವಸೇನೆಯು ಕೇಸು ದಾಖಲಿಸಿದೆ. ಯಡಿಯೂರಪ್ಪ ನವರು ಈ ಹಿಂದೆ ಕರ್ನಾಟಕ ಬಂದ್ ವಿಫಲಗೊಳಿಸಲು ಎಲ್ಲೆಂದರಲ್ಲಿ ಪೊಲೀಸರನ್ನು ನಿಯೋಜಿಸಿ ಅನೇಕ ಮುಖಂಡರುಗಳನ್ನು ಬಂಧಿಸಿದ್ದರು. ಯಡಿಯೂರಪ್ಪ ಅವರನ್ನು ನೇರವಾಗಿ ಕೇಳುತ್ತೇನೆ ಯಾಕೆ ಇಷ್ಟು ಅರ್ಜೆಂಟಾಗಿ ಪ್ರಾಧಿಕಾರ ರಚನೆ ಮಾಡಿದ್ದೀರಿ? ನೀವು ಕೆಟ್ಟ ದಾರಿ ಹಿಡಿದು, ಕನ್ನಡವನ್ನು ತುಳಿಯಲು ಹೊರಟಿದ್ದೀರಿ. ನಿಮಗೆ ಸರ್ಕಾರ ಉಳಿಸುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮರಾಠ ಪ್ರಾಧಿಕಾರ ರದ್ದುಗೊಳಿಸುವಂತೆ ಒತ್ತಾಯಿಸಿ ಇದರ ಅಂಗವಾಗಿ ಜ.9 ರಂದು ರಾಜ್ಯಾದ್ಯಂತ ಸುಮಾರು 1,000 ಕಡೆ ರೈಲ್ವೆ ಹಳಿಯ ಮೇಲೆ ಕುಳಿತು ಸುಮಾರು 3,000 ಸಾವಿರ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಸಾವಿರಾರು ಜನರನ್ನು ಜೈಲಿಗೆ ಕಳುಹಿಸಲು ಜೈಲ್ ಚಳವಳಿ ನಡೆಸಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಚಳುವಳಿ ನಡೆಸಲಾಗುವುದು ಎಂದರು.

ಸಿದ್ದಗಂಗಾ ಮಠದ ಶ್ರೀ ಗಳಿಗೆ ಏಕೆ ಭಾರತ ರತ್ನ ಕೊಡಲಿಲ್ಲ. ಯಡಿಯೂರಪ್ಪ ನವರೇ ನಿಮಗೆ ಒಂದು ನಿಮಿಷ ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಇಲ್ಲ. ಜನವರಿ 26 ಒಳಗೆ ಶಿವಕುಮಾರ ಸ್ವಾಮಿ ಅವರಿಗೆ ಭಾರತ ರತ್ನ ಕೊಡಬೇಕು. ಈ ಬಗ್ಗೆ ಪಾರ್ಲಿಮೆಂಟ್ ಸದಸ್ಯರು ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲಾ ವರ್ಗದ ಸನ್ಯಾಸಿಗಳು, ಮಠಾಧಿಪತಿಗಳನ್ನು ಸೇರಿಸಿಕೊಂಡು ದೊಡ್ಡ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ದರೋಡೆಕೋರರು. ಇವರು ಸರ್ಕಾರದ ಮಾತು ಕೇಳುತ್ತಿಲ್ಲ. ವಂತಿಗೆ ವಸೂಲಿಯು ಒಂದು ದರೋಡೆ ರೀತಿಯೇ. ವಂತಿಗೆ ಕಟ್ಟಲಿಲ್ಲ ಎಂದರೆ ಮಕ್ಕಳ ಆನ್ಲೈನ್ ಕ್ಲಾಸ್ ರದ್ದು ಮಾಡುತ್ತಾರೆ. ಸುರೇಶ್ ಕುಮಾರ್ ಅವರೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಸೇರಿದಂಥೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News