ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಿದ್ದಾರ್ಥ ಪತ್ನಿ ಮಾಳವಿಕಾ ವಿರುದ್ಧ ತನಿಖೆಗೆ ಎಸ್.ಆರ್.ಹಿರೇಮಠ ಆಗ್ರಹ

Update: 2020-12-22 14:40 GMT

ಬೆಂಗಳೂರು, ಡಿ.22: ಸಿದ್ದಾರ್ಥ್ ಮಾಲಕತ್ವದಲ್ಲಿದ್ದ ಕಾಫಿ ಡೇ ಎಂಟರ್ ಪ್ರೈಸಸ್ ಲಿ. ಕಂಪನಿಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಗಳ ಹಗರಣದ ಕುರಿತು ಶೀಘ್ರವೇ ತನಿಖೆ ನಡೆಯಬೇಕು ಎಂದು ಸಮಾಜ ಪರಿವರ್ತನಾ ವೇದಿಕೆಯ ಸಂಸ್ಥಾಪಕ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.

ಈ ಸಂಬಂಧ ನಗರದ ಗಾಂಧೀ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ, ಜಾರಿ ನಿರ್ದೇಶನಾಲಯ, ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್‍ಎಫ್‍ಐಒ), ಸೆಬಿ, ಕಪ್ಪು ಹಣ ಕುರಿತ ವಿಶೇಷ ತನಿಖಾ ತಂಡ(ಎಸ್‍ಐಟಿ), ಲೋಕಪಾಲ, ಕೇಂದ್ರೀಯ ವಿಚಕ್ಷಣ ದಳ(ಸಿವಿಸಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನವೆಂಬರ್ 25ರಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಂದ ಷೇರುಗಳನ್ನು ಸಂಗ್ರಹಿಸಿರುವ ಸಂಸ್ಥೆಯಾಗಿದ್ದು, ಅದರ ಮೂಲಕ ಸಾವಿರಾರು ಕೋಟಿ ರೂ.ಗಳು ವಂಚನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ, ಈ ಸಂಬಂಧ ತನಿಖೆ ನಡೆಸಬೇಕು ಎಂದು ಪ್ರಧಾನಿ, ಹಣಕಾಸು ಸಚಿವರು ಸೇರಿದಂತೆ ಮತ್ತಿತರಿಗೆ ಪತ್ರ ಬರೆಯಲಾಗಿದೆ ಎಂದು ಹಿರೇಮಠ್ ಮಾಹಿತಿ ನೀಡಿದರು.

ಕಾಫಿ ಡೇ ಕಂಪನಿಯ ಸಂಸ್ಥಾಪಕ ಸಿದ್ದಾರ್ಥ್ ಅವರು ಸಿಡಿಇಎಲ್ ಕಂಪನಿ ಮೂಲಕ 3,535 ಕೋಟಿ ಮೊತ್ತದ ಹಣವನ್ನು ಎಂಎಸಿಇಎಲ್‍ಗೆ ವರ್ಗಾವಣೆ ಮಾಡಿದ್ದಾರೆ. ಕಂಪನಿಯ ಆಡಿಟರ್ ಗಳು ಸಲ್ಲಿಸಿದ ವರದಿಯು ಇದರಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಖಚಿತಪಡಿಸಿದೆ. ಅದರಲ್ಲಿ, 3,000 ಕೋಟಿಗೂ ಹೆಚ್ಚು ಸಾಲವನ್ನು ವಿವಿಧ ಬ್ಯಾಂಕ್‍ಗಳಿಂದ ಪಡೆದು ವಂಚಿಸಲಾಗಿದೆ. ಹೀಗಾಗಿ, ಈ ಹಗರಣದ ಸಮಗ್ರ ಸಂಗತಿ ಹೊರ ಬರಬೇಕಾದರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಅಧ್ಯಕ್ಷರಾಗಿರುವ ಎಸ್.ವಿ. ರಂಗನಾಥ್ ಅವರಿಗೂ ಪತ್ರ ಬರೆಯಲಾಗಿದೆ. ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದವರು ಹಾಗೂ ಸ್ವತಂತ್ರ ನಿರ್ದೇಶಕರಾಗಿದ್ದವರು ಸಿದ್ಧಾರ್ಥ್ ಸಾವಿನ ಬಳಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ, ಅಕ್ರಮದ ಕುರಿತು ಮಾಹಿತಿ ನೀಡುವುದು ಅವರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಕಾಫಿ ಡೇಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ವಿ.ಜಿ.ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ, ನಿತಿನ್ ಭಾಗಮನೆ, ಬಾಲರಾಜ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಫಿ ಡೇ ಮುಖ್ಯಸ್ಥರಾಗಿದ್ದ ಸಿದ್ಧಾರ್ಥ ಅವರು ಸುಮಾರು 60 ಸಾವಿರ ಕೋಟಿ ಮೊತ್ತದ ಷೇರು ಮಾರುಕಟ್ಟೆ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಈ ಕುರಿತು ಸಿಬಿಐ ತನಿಖೆ ಆರಂಭವಾಗಿದ್ದು, ಯಾವುದೇ ಪ್ರಗತಿಯಾಗಿಲ್ಲ. ಸಿಡಿಇಎಲ್‍ನ ಲೆಕ್ಕಾಚಾರವನ್ನು ಸಿಬಿಐನಲ್ಲಿದ್ದ ಅಶೋಕ ಕುಮಾರ ಮಲ್ಹೋತ್ರಾ ತನಿಖೆ ನಡೆಸಿದ್ದಾರೆ. ಆದರೆ, ಅದರಲ್ಲಿ ಸಿದ್ಧಾರ್ಥ್ ಮೇಲಿದ್ದ ಒತ್ತಡವನ್ನು, 3,535 ಕೋಟಿ ಹಣ ವರ್ಗಾವಣೆಯನ್ನು ಉಲ್ಲೇಖಿಸಲಾಗಿದೆ ಎಂದು ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News