ರಾಜ್ಯದಲ್ಲಿ ಮೊದಲ ಹಂತದ ಗ್ರಾ.ಪಂ. ಚುನಾವಣೆ: ಅಡೆ ತಡೆಗಳ ನಡುವೆ ಶಾಂತಿಯುತ ಮತದಾನ

Update: 2020-12-22 16:15 GMT

ಬೆಂಗಳೂರು, ಡಿ.22: ಕೊರೋನ ಆತಂಕದ ನಡುವೆಯೇ ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, ಮತಪತ್ರಗಳಲ್ಲಿ ಚಿಹ್ನೆಗಳ ಅದಲು ಬದಲು, ಮತದಾರರ ಪಟ್ಟಿ ಬದಲು, ಮುದ್ರಣ ದೋಷ ಹಾಗೂ ಮತದಾನ ಸ್ಥಗಿತ, ಅಭ್ಯರ್ಥಿಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ತಳ್ಳಾಟ-ನೂಕಾಟ, ಪೊಲೀಸರ ಲಘು ಲಾಠಿ ಪ್ರಹಾರದಂತಹ ಘಟನೆಗಳ ನಡುವೆಯೂ ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ.

ಕೋವಿಡ್ ಕಾರಣದಿಂದಾಗಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದ ಸರಕಾರಕ್ಕೆ, ಕೋರ್ಟ್ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆ ಬಳಿಕ ಅಧಿಸೂಚನೆ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಇದೀಗ ಮೊದಲನೇ ಹಂತದ ಚುನಾವಣೆ ನಡೆದಿದ್ದು, ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ.

ರಾಜ್ಯದ 117 ತಾಲೂಕುಗಳ 3,019 ಗ್ರಾಮ ಪಂಚಾಯತ್ ಗಳಿಗೆ ಮತದಾನ ನಡೆದಿದ್ದು,  43,238 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,17,383 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ನಿರ್ಧಾರ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನವು ಸಂಜೆ 5 ಗಂಟೆಯವರೆಗೂ ನಡೆದಿತ್ತು, ಹಲವು ಕಡೆಗಳಲ್ಲಿ ಮುಂಜಾನೆಯೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರೆ, ಹಲವೆಡೆ ಸಂಜೆಯತನಕವೂ ಮತಗಟ್ಟೆಗಳ ಕಡೆಗೆ ಮತದಾರರು ಸುಳಿಯದಿರುವುದು ವರದಿಯಾಗಿದೆ.

ಮೈ ಕೊರೆಯುವ ಚಳಿಯಲ್ಲೂ ಮತದಾರರು ತಮ್ಮ ಮತವನ್ನು ಚಲಾಯಿಸಲು ಸಾಲಿನಲ್ಲಿ ನಿಂತುಕೊಂಡಿದ್ದ ದೃಶ್ಯಗಳು ಕಂಡು ಬಂದವು. ದೈನಂದಿನ ಕೃಷಿ ಕೆಲಸಕ್ಕೆ ಹಾಗೂ ಇತರೆ ಉದ್ಯೋಗಗಳಿಗೆ ತೆರಳುವವರು ಬೆಳಗ್ಗೆ ಮತಗಟ್ಟೆಗಳಿಗೆ ಬಂದು ಮತದಾನ ಚಲಾಯಿಸುತ್ತಿದ್ದರು. ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.

ಪಟ್ಟಿ ಅದಲು-ಬದಲು: ಮತದಾರರ ಪಟ್ಟಿ ಅದಲು ಬದಲಾಗಿ ಗೊಂದಲ ಉಂಟಾದ ಕಾರಣ ದಾವಣಗೆರೆಯಲ್ಲಿ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ ಮಾಡಲಾಗಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳು 1 ಮತ್ತು ಹೆಬ್ಬಾಳು 2 ಎರಡು ಕ್ಷೇತ್ರಗಳ ಮತದಾನ ಮುಂದೂಡಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದರು.

ಚಿಹ್ನೆ ಅದಲು ಬದಲು: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ್ ಗ್ರಾಮ ಪಂಚಾಯತ್ ಎರಡನೇ ವಾರ್ಡ್ ನಲ್ಲಿ ಅಭ್ಯರ್ಥಿ ಬಯಸಿದ ಮತ್ತು ತಾನು ಪ್ರಚಾರ ಮಾಡಿದ ಚಿಹ್ನೆಯ ಗುರುತು ಒಂದಾದರೆ, ಇಂದು ಚುನಾವಣೆ ಮತಪತ್ರದಲ್ಲಿ ಬೇರೆಯೊಂದು ಚಿಹ್ನೆ ಮುದ್ರಣವಾಗಿತ್ತು. ಹಲ್ಲುಜ್ಜುವ ಪೇಸ್ಟ್ ಬದಲು ಬ್ರಷ್ ಚಿಹ್ನೆ ಮುದ್ರಣವಾಗಿದೆ. ಇದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ನನಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಇದೇ ಚಿಹ್ನೆ ಮೇಲೆಯೇ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಪ್ರಿಂಟ್ ಆಗಿದೆ ಎಂದು ಅಭ್ಯರ್ಥಿ ಗಜಾನಂದ ತಕರಾರು ತೆಗೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಮೇಶ ಪೆದ್ದೆ, ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಚಿಹ್ನೆ ಸರಿಯಾಗಿದೆ. ಫಾರಂ ಸಂಖ್ಯೆ 10 ರಲ್ಲಿ 139 ಹಲ್ಲುಜ್ಜುವ ಬ್ರಷ್ ಎಂದೇ ನಮೂದಾಗಿದೆ ಎಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿ ದೂರು ನೀಡಲಿ ಪರಿಶೀಲಿಸಲಾಗುವುದು. ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಶಂಕರಬಂಡೆ ಗ್ರಾ.ಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಚಿಹ್ನೆ ಮುದ್ರಣ ದೋಷದಿಂದಾಗಿ ಮತದಾನ ಸ್ಥಗಿತಗೊಂಡಿತ್ತು. ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿಯ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಈ ಗ್ರಾಪಂ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಎರಡನೇ ಹಂತದ ಚುನಾವಣೆಯ ದಿನ ಅಥವಾ ಇನ್ನೊಂದು ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಪಿಸ್ತೂಲು ಪತ್ತೆ: ವಿಜಯಪುರ ಜಿಲ್ಲೆಯ ಮಕಣಾಪುರ ಗ್ರಾಪಂ ಚುನಾವಣೆಯಲ್ಲಿ 100 ವರ್ಷದ ಬಾಮುಲು ಹುನ್ನು ಲಮಾಣಿ ಅವರು ಮತ ಚಲಾಯಿಸಿ ಗಮನ ಸೆಳೆದರು. ಬೆಳಗಾವಿಯ ದೇಸೂರು ಗ್ರಾಮದಲ್ಲಿ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿ ಬಳಿ ಪಿಸ್ತೂಲು ಪತ್ತೆಯಾಗಿದೆ. ಚುನಾವಣೆ ವೇಳೆ ಪೊಲೀಸ್ ಠಾಣೆಗೆ ಜಮಾ ಮಾಡಬೇಕಿದ್ದ ಪಿಸ್ತೂಲನ್ನು ಕರ್ತವ್ಯ ಸಂದರ್ಭದಲ್ಲಿ ತಮ್ಮೊಂದಿಗೆ ತರಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

15 ದಿನದ ಮಗುವಿನೊಂದಿಗೆ ಆಗಮಿಸಿದ ಅಭ್ಯರ್ಥಿ: ಹಾವೇರಿ ಜಿಲ್ಲೆಯ ಅಕ್ಕೂರು ಗ್ರಾಮದಲ್ಲಿ ಬಾಣಂತಿಯೊಬ್ಬರು ತಮ್ಮ 15 ದಿನದ ಹಸುಗೂಸಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿರುವ ವಿಶೇಷ ಘಟನೆ ನಡೆದಿದೆ. ಅಕ್ಕೂರು ಗ್ರಾಮದ 2ನೇ ವಾರ್ಡಿನಿಂದ ಬಾಣಂತಿ ಮಹಿಳೆ ನೇತ್ರಾವತಿ ಮರಿಗೌಡ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು 15 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತಿ ಮಹಿಳೆಯ ಪರವಾಗಿ ಸೂಚಕರು ನಾಮಪತ್ರ ಸಲ್ಲಿಸಿದ್ದರು. ಇಂದು ಮಗುವಿನೊಂದಿಗೆ ಮತಗಟ್ಟೆಗೆ ಬಂದು ಅಭ್ಯರ್ಥಿಯಾಗಿರುವ ಬಾಣಂತಿ ಮಹಿಳೆ ಮತ ಚಲಾಯಿಸಿದ್ದಾರೆ.

ನೇಣಿಗೆ ಶರಣು: ಧಾರವಾಡ ತಾಲೂಕಿನ ಗರಗ ಗ್ರಾಮದ 2ನೇ ವಾರ್ಡನ ಅಭ್ಯರ್ಥಿ ದಾಮೋದರ ಯಲಿಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲವಾದರೂ, ಚುನಾವಣೆಯ ಕಾರಣದಿಂದಲೇ ಮಾನಸಿಕವಾಗಿ ಹೀಗೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಬಂದೋಬಸ್ತ್: ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದ ಚುನಾವಣೆಗೆ 40 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. 111 ಕೆಎಸ್‍ಆರ್‍ಪಿ ಫ್ಲಟೂನ್, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್ ಇನ್‍ಸ್ಪೆಕ್ಟರ್, ಎಎಸ್‍ಐ ಸೇರಿದಂತೆ 1746 ಅಧಿಕಾರಿಗಳು, 5369 ಪೊಲೀಸ್ ಕಾನ್‍ಸ್ಟೇಬಲ್‍ಗಳು, 10969 ಹೋಂ ಗಾರ್ಡ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಮತಪತ್ರ: ಗೌಪ್ಯ ಮತದಾನ ನಿಯಮವನ್ನು ಉಲ್ಲಂಘಿಸಿ ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದ ವ್ಯಕ್ತಿಯೊಬ್ಬರು ತಾವು ಮತ ಚಲಾಯಿಸಿದ ಮತಪತ್ರದ ಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮತದಾನ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಿದ್ದರೂ ವ್ಯಕ್ತಿ ಮೊಬೈಲ್ ಒಯ್ದು ತಾವು ಮತಹಾಕಿದ ಮತಪತ್ರದ ಚಿತ್ರ ತೆಗೆದಿದ್ದಾರೆ.

ರಾಜ್ಯದ 109 ತಾಲೂಕುಗಳ 2,709 ಪಂಚಾಯತ್‍ಗಳಿಗೆ ಡಿ.27 ರಂದು ಚುನಾವಣೆ ನಡೆಯಲಿದ್ದು, ಡಿ.30 ರಂದು ಎರಡೂ ಹಂತದ ಚುನಾವಣೆಗಳ ಮತ ಎಣಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News