ಮಾಸ್ಕ್ ಹಾಕದ್ದಕ್ಕೆ ಯುವಕನಿಗೆ ಹಲ್ಲೆ ನಡೆಸಿದ ಪಿಎಸ್ಸೈ: ಆರೋಪ
ಚಿಕ್ಕಮಗಳೂರು, ಡಿ.22: ಮಾಸ್ಕ್ ಹಾಕದ ಕಾರಣಕ್ಕೆ ಪಿಎಸ್ಸೈ ಓರ್ವರು ಯುವಕನೋರ್ವನಿಗೆ ಮನಬಂದಂತೆ ಥಳಿಸಿ ಗಾಯಗೊಳಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಠಾಣೆಯ ಮುಂದೆ ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ವರದಿಯಾಗಿದೆ.
ಮಂಗಳವಾರ ಸಂಜೆ ಆಲ್ದೂರು ಠಾಣೆಯ ಪಿಎಸ್ಸೈ ಶಂಭುಲಿಂಗಯ್ಯ ಯುವಕನೋರ್ವನನ್ನು ತಡೆದು ನಿಲ್ಲಿಸಿ ಮಾಸ್ಕ್ ಹಾಕಿಲ್ಲ ಎಂದು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆಯಿಂದಾಗಿ ಯುವಕನ ಕೈ, ಕಣ್ಣು, ಮೂಗಿಗೆ ಗಾಯವಾಗಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆಂದು ತಿಳಿದುಬಂದಿದೆ.
ಈ ಘಟನೆಯಿಂದ ಆಕ್ರೋಶಗೊಂಡ ಯುವಕನ ಸ್ನೇಹಿತರು ಹಾಗೂ ಸಾರ್ವಜನಿಕರು ಶಂಭುಲಿಂಗಯ್ಯ ಅವರಿದ್ದ ಪೊಲೀಸ್ ವಾಹನವನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ, ಹಲ್ಲೆ ಮಾಡಿರುವುದನ್ನು ಪ್ರಶ್ನಿಸಿದ್ದು, ಇದಕ್ಕೆ ಪಿಎಸ್ಸೈ ಉಡಾಫೆಯಾಗಿ ಉತ್ತರ ನೀಡಿದ್ದಾರೆಂದು ಆರೋಪಿಸಲಾಗಿದೆ.
ಇದರಿಂದ ಮತ್ತಷ್ಟು ಕುಪಿತರಾದ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಲ್ದೂರು ಪಟ್ಟಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪಿಎಸ್ಸೈ ಅವರನ್ನು ಮುಖಂಡರು ತರಾಟೆಗೆ ಪಡೆದಿದ್ದಾರೆ. ಘಟನೆಯಿಂದಾಗಿ ಠಾಣೆ ಎದುರು ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಾಸ್ಕ್ ವಿಚಾರಕ್ಕೆ ಯುವಕನಿಗೆ ನಾನು ಹಲ್ಲೆ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ ಹಲ್ಲೆ ಮಾಡಿದ ಸ್ಥಳದಲ್ಲಿ ನಾನು ಇರಲಿಲ್ಲ. ಘಟನಾ ಸ್ಥಳದಲ್ಲಿ ಏನಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಅವರನ್ನೇ ಕೇಳಬೇಕು.
- ಶಂಭುಲಿಂಗಯ್ಯ, ಪಿಎಸ್ಸೈ, ಆಲ್ದೂರು ಪೊಲೀಸ್ ಠಾಣೆ