ಕೋವಿಡ್19 ಮಾರ್ಗಸೂಚಿ ಅನ್ವಯ ಜ.17ರಂದು ಮಕ್ಕಳಿಗೆ ಪೋಲಿಯೊ ಲಸಿಕೆ

Update: 2020-12-22 16:53 GMT
ಟಿ.ಎಂ.ವಿಜಯಭಾಸ್ಕರ್

ಬೆಂಗಳೂರು, ಡಿ.22: ಕೋವಿಡ್-19ರ ಮಾರ್ಗಸೂಚಿ ಅನ್ವಯ 2021ನೆ ಸಾಲಿನ ಜನವರಿ 17 ರಂದು ರಾಜ್ಯದ ಸುಮಾರು 66 ಲಕ್ಷ ಮಕ್ಕಳಿಗೆ ಸುರಕ್ಷಿತವಾಗಿ ಪೋಲಿಯೊ ಲಸಿಕೆ ಹಾಕಲು ಎಲ್ಲ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೂಚಿಸಿದರು.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಚಾಲನಾ ಸಮಿತಿ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5 ವರ್ಷ ವಯೋಮಿತಿ ಒಳಗಿನ ಅಂದಾಜು 66 ಲಕ್ಷ  ಮಕ್ಕಳಿದ್ದು ಜನವರಿ 17 ರಂದು ನಡೆಯಲಿರುವ ಪಲ್ಸ್ ಪೋಲಿಯೊ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಲು ಕ್ರಮಕೈಗೊಳ್ಳುವ ಮೂಲಕ ರಾಜ್ಯವನ್ನು ಪಲ್ಸ್ ಪೋಲಿಯೊ ಮುಕ್ತವಾಗಿರಿಸಬೇಕೆಂದು ತಿಳಿಸಿದರು.

ಕೋವಿಡ್-19ರ ಸಮಯದಲ್ಲಿ ಈ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು ಸರಕಾರ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಲಸಿಕೆ ಹಾಕಿಸಲು ಪೋಷಕರು ತಮ್ಮ ಐದು ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೂ ಯಾವುದೆ ಆತಂಕಕ್ಕೆ ಒಳಗಾಗದೆ ಪೋಲಿಯೊ ಲಸಿಕೆಯನ್ನು ಹಾಕಿಸುವಂತೆ ವಿಜಯಭಾಸ್ಕರ್ ಮನವಿ ಮಾಡಿದರು.

ರಾಜ್ಯದ ಜಿಲ್ಲಾ ತಾಲೂಕು ಹೋಬಳಿ ಕೇಂದ್ರಗಳು ಸೇರಿದಂತೆ ಪ್ರತಿ ಗ್ರಾಮಗಳಲ್ಲೂ ಸುರಕ್ಷಿತ ಲಸಿಕಾ ಕಾರ್ಯಪಡೆ ಮೂಲಕ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವುದರ ಜೊತೆಗೆ ಲಸಿಕಾ ಕಾರ್ಯಪಡೆಯ ಮೂಲಕ ನಿಗಾವಹಿಸಲಾಗುವುದು ಎಂದು ಅವರು ತಿಳಿಸಿದರು.

ಮಹಾನಗರಪಾಲಿಕೆಗಳು, ನಗರ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳಲ್ಲಿನ ಮಕ್ಕಳನ್ನೂ, ಕಟ್ಟಡ ಕಾರ್ಮಿಕರ ಮಕ್ಕಳನ್ನು ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವುದರ ಜೊತೆಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಪ್ರಯಾಣಿಕರ ಐದು ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಲು ಎಲ್ಲ ರೀತಿಯ ಕ್ರಮ ಜರುಗಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದರು.

ಲಸಿಕೆ ಹಾಕುವ ಕೆಲಸದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಕರು ಹಾಗೂ ಈ ಬಾರಿ ಸ್ತ್ರೀ ಶಕ್ತಿ ಸಂಘಗಳು ಪಾಲ್ಗೊಳ್ಳಲಿದ್ದು, ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಕಾರ್ಯಕರ್ತರು ಕೋವಿಡ್-19 ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. 

ಪಲ್ಸ್ ಪೋಲಿಯೊ ರಾಷ್ಟ್ರೀಯ ದಿನದ ಲಸಿಕಾ ಯಶಸ್ಸಿಗೆ ಪ್ರಮುಖವಾಗಿ, ವೈದ್ಯಕೀಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ವಿದ್ಯುತ್‍ಚ್ಛಕ್ತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಪ್ರಮುಖವಾಗಿ ಕರ್ತವ್ಯ ನಿರ್ವಹಿಸಬೇಕು. ಅಲ್ಲದೆ ಕಾರ್ಯಕ್ರಮದ ಯಶಸ್ಸಿಗೆ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆಗಳ ನೆರವನ್ನು ಪಡೆಯಬೇಕು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ವಿಜಯಭಾಸ್ಕರ್ ಹೇಳಿದರು.

ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ.ಅರುಂಧತಿ, ಉಪ ನಿರ್ದೇಶಕಿ ಡಾ.ರಂಜನಿ ಹಾಗು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News