ಕೊರೋನ ಪ್ರಭೇದ ಕಾಣಿಸಿಕೊಂಡ ರಾಷ್ಟ್ರಗಳಿಂದ 12,300 ಪ್ರಯಾಣಿಕರು ರಾಜ್ಯಕ್ಕೆ ಆಗಮನ: ಎಚ್.ಕೆ.ಪಾಟೀಲ್

Update: 2020-12-22 17:04 GMT

ಬೆಂಗಳೂರು, ಡಿ.22: ಬ್ರಿಟನ್ ದೇಶದಲ್ಲಿ ಕೊರೋನ ವೈರಸ್ ಎರಡನೆ ಪ್ರಭೇದವು ಕಾಣಿಸಿಕೊಂಡಿರುವ ವರದಿಗಳು ಮತ್ತು ಈ ಎರಡನೆ ಪ್ರಭೇದವು ಹರಡುವಿಕೆಯಲ್ಲಿ ಇನ್ನಷ್ಟು ಹೆಚ್ಚು ವ್ಯಾಪಕವಾಗಿದೆ ಎಂದು ಗೊತ್ತಾಗಿ ಕಳವಳಕಾರಿ ಪರಿಸ್ಥಿತಿ ನಿರ್ಮಿಸಿದೆ. ಆದರೂ, ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಬ್ರಿಟನ್, ನೆದರ್‍ಲ್ಯಾಂಡ್ ಮತ್ತು ಇತರ ದೇಶಗಳಿಂದ ಈಗಾಗಲೆ ಭಾರತಕ್ಕೆ ಬಂದಿರುವ ಪ್ರಯಾಣಿಕರ ಚಲನವಲನವನ್ನು ನಿಯಂತ್ರಿಸುವ ಅಥವಾ ನಿಗಾವಹಿಸುವ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗೆ ಪತ್ರ ಬರೆದಿರುವ ಅವರು, ನನಗೆ ಬಂದಿರುವ ಮಾಹಿತಿಯಂತೆ 12,300 ಜನ ಪ್ರಯಾಣಿಕರು ಕೊರೋನ ಪ್ರಭೇದ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕರನ್ನು ಕನಿಷ್ಠ ಸ್ಕ್ರೀನಿಂಗ್ ಸಹ ಮಾಡಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಇವರೆಲ್ಲರನ್ನು ಹೊರಗೆ ಬಂದ ಮೇಲೆ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದರೆ, ಅವರಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡು ಬಂದರೆ ಯಾವುದೇ ರೀತಿಯ ಪ್ರಯೋಜನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗದು. ಈಗ ಆರ್‍ಟಿಪಿಸಿಆರ್ ಪರೀಕ್ಷೆಗೆ ಮುಂದಾಗಿರುವುದು ರಾಜ್ಯ ಸರಕಾರದ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ. ಈ ಕೂಡಲೇ ಕಾರ್ಯಪ್ರವೃತ್ತರಾಗಿ ಕೊರೋನದ ಎರಡನೆ ಪ್ರಭೇದ ಕಂಡು ಬಂದಿರುವ ದೇಶಗಳಿಂದ ಬಂದಿರುವ ಪ್ರಯಾಣಿಕರನ್ನು ಕೂಡಲೆ ಐಸೋಲೇಷನ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News